Tuesday, September 12, 2017

ತುಸು ನಾಚಿಬಿಡು


ಸೋಲುತಿದೆ ಮನವು
ನಿನ್ನಯ ನೋಟಕೆ ಇಲ್ಲೆ 
ಕಣ್ಣ ಸಪ್ಪಳಕೆ ಬೆರಗಾಗಿ
ನೋಡುತಿರುವೆನು
ರೆಪ್ಪೆಯ ಬಡಿದು ನೀ ಕಾವ್ಯ ಒಸರುವಾಗ
ಮುಂದೆ ಕೂತ ನಾನು ಕವಿಯಾದೆ..

ಇಂಥ ಮೌನದ ಅಮಲು
ಏಕೆ ನಿನ್ನಲ್ಲಿ? 
ಪ್ರಜ್ಞೆ ತಪ್ಪಿತು ನನಗೆ
ಆ ಗಾಢತೆಯ ಒಳಗೆ
ತುಸು ನಾಚಿಬಿಡು ಅಲ್ಲೆ
ನನ್ನ ಕಾವ್ಯಕನ್ನಿಕೆ!!

ವಿರಹವ ತಾಳಲಾಗದೆ ಬಳಲುವ
ಮನಕೆ
ನಿನ್ನ ನಗುವೊಂದೆ ಔಷಧಿ
ಹೆಚ್ಚಾದರೂ ಸರಿಯೇ
ಹರಿಸಿಬಿಡು ಹಾಗೆ.. 

ಕಿವಿಯೋಲೆಯ ಸರಸಿ
ಗುಟ್ಟೊಂದು ಹೇಳುವುದಿದೆ 
ಮುದ್ದಿಸಲು ನೆಪವೊಂದು ಬೇಕು!! 

ತುಟಿ ಅಂಚಲಿ
ಸೂಸುತಿರುವ ಜೇನಲ್ಲಿ
ನಿನ್ನ ಅದ್ದು ಮುದ್ದಿಸುವೆ
ಅಪ್ಪಿಬಿಡು ಎದೆಯ
ಕಾರ್ಮೋಡಗಳು ಸೇರಿದಂತೆ..

- ಅ.ರಾ.ತೇ
#ಎಂ.ಎಚ್ 

Thursday, August 31, 2017

ನಲ್ಮೆಯೊಂದೆ ಹೆಸರು







ನಿನ್ನ ತುಟಿ ಅಂಚಿನ ತಂತಿಯ
ಮೀಟುವ ನಾನು
ಪ್ರತಿ ಬಾರಿಯು ಹೊಸ ನಾದವ
ಹೊಮ್ಮಿಸುತ್ತಲೆ ಇರುವೆ

ಅದೆಂಥ ಸವಿ ಸೊಗಸು
ನಿನ್ನ ಕಿರುಬೆರಳು ತಾಕಿದಾಗ
ನನ್ನ ಎದೆಗೊರಗಿ ನೀ ನಾಚಿದಾಗ!!
ಕಣ್ಣುಗಳು ಬೆರೆತಾಗ
ಮೌನವೇ ನೇಪಥ್ಯ
ಆಗ ನಡೆಯುವ ಸಂಭಾಷಣೆಯೊಂದೆ
ಜೀವನದ ಸತ್ಯ..

ಕದ್ದು ನೋಡಬೇಡ  ಹಿಂದೆ ತಿರುಗಿ
ಬಿದ್ದೆ ಬೀಳುವೆ ಮರುಳಾಗಿ
ಉಪೇತವಾಗಿದೆ ತಳಮಳವು
ನೀ ಸನಿಹವಿರದ ಪ್ರತಿ ಕ್ಷಣವು..

ತೋಳಬಂಧಿಯಾಗಿಬಿಡು ಈ ನಿಮಿಷ
ವಿರಹವ ನೀಗಿಸು ಇಲ್ಲಿಯೇ
ಉಸಿರಾಟದ ವೇಗ ಹೆಚ್ಚಾಗುವ ಗಳಿಗೆಗೆ
ಹೃದಯಬಡಿತ ಸ್ಪರ್ಧೆಯ ನೀಡುತಿದೆ
ಈ ಅನವರತ  ಅನುಭಾವಕ್ಕೆ
ನಲ್ಮೆಯೊಂದೆ  ಹೆಸರು..

- ಅ.ರಾ.ತೇ
#ಎಂಎಚ್

Monday, August 21, 2017

ಅನುರಕ್ತೆ

ನಲ್ಲೆ ನಿನ್ನ ಸನಿಹ ನಿಂತು
ಮರೆವೆನು ನನ್ನೆ ನಾನು
ಹೃದಯ ಬಡಿತ ಏರುಪೇರು
ನೀ ನಗುವ ಕ್ಷಣವೆಲ್ಲವೂ..

ನೀನು ಅನುರಕ್ತೆ
ಮೋಹಿಸುವೆ ನನ್ನ, ಕಣ್ಣ ಸಂಚಲ್ಲಿ
ಅಡಗಲಿ ಇನ್ನೆಲ್ಲಿ?
ಕನಸಲು ಬಿಡದೆ ಮುದ್ದಿಸುವಾಗ
ನೀ ನಾಚುವ ಪರಿಗೆ
ಕಪೋಲಗಳು ಕೆಂಪಾಗಿವೆ
ಸಂಜೆಯ ಸೂರ್ಯ ಅಲ್ಲೆ ಮರೆಯಾದ!!

ದೂರದ ಊರಲಿ ಎಲ್ಲೋ ಮಳೆಯಂತೆ
ನನಗಿಲ್ಲಿ ಚುಂಬನದ ಧಾರೆ
ಮನದಿ ವಿದ್ಯುಲ್ಲತೆ
ನಿನ್ನ ಬಿಗಿಸಪ್ಪುಗೆಯಲಿ ಕೈಸೆರೆ

ಸಂಚಿತವಾಗಿದೆ ಪ್ರತಿ ನಿಮಿಷ
ಮನಗಳು ಬೆರೆತ ತರುವಾಯ
ಉಳಿದಿವೆ ಅಗಣಿತ ಕವಿತೆಗಳು
ಹೇಳದೆ ಹೋದರೆ ನಿರುಪಾಯ
ಹಾಡಿತು ಕೆಂದುಟಿ ನಡಗುತಲೆ
ಸಿಹಿಯೇ ಇನ್ನು ಈ ಸಮಯ..

- ಅ.ರಾ.ತೇ
#ಎಂಎಚ್  #21/08/2017
 

Wednesday, August 16, 2017

ಕಾಯುತ ಕೂತ ಹೃದಯವಿದು

ಇನ್ನೇನು ಕೆಲಸವಿದೆ ನನಗೆ
ನಿನ್ನ ಪ್ರೀತಿಸುವುದ ಬಿಟ್ಟು
ತೋಚದೆ ಹೋದರು ಬರೆಯುವೆನು
ನಿನಗಾಗಿ ಪದಗಳ ಕೂಡಿಟ್ಟು

ಕಾಯಿಸಿ ನನ್ನೆದೆ ನೋಯಿಸದಿರು
ಕಾಯುತ ಕೂತ ಹೃದಯವಿದು
ನಿನ್ನಯ ನಗುವಿನ ಗೊಂಚಲ ಹಿಡಿದು
ಮುದ್ದಿಸುವೆ ಜಗವನೆ ಮರೆತು

ಪ್ರೇಮದ ಪತ್ರ ಕೊಟ್ಟೆನು ನಿನಗೆ
ಸಿಹಿ ಮುತ್ತನು ಕೊಟ್ಟು ಗೀಚಿದೆ ನನ್ನೆದೆಗೆ
ದಿಮ್ಮನೆ ಮೂಡುವ ನೆನಪಿನ ಸುತ್ತ
ಇರುವುದು ಒಂದೇ ನಿನ್ನಯ ಚಿತ್ರ

ಸಂಭ್ರಮದ ಮಳೆಯೇ ತುಂಬಿದೆ ಈಗ
ಭಾವಗಳ ಬಾಂಧವ್ಯದಲಿ
ಪ್ರೀತಿಯ ಧಾರೆಲಿ ಮುಳುಗಿದ ನಮಗೆ
ಅನುಕ್ಷಣವು ಸಮ್ಮಿಲನದ ಗಳಿಗೆ

- ಅ.ರಾ.ತೇ
#MH #16/08/17

Tuesday, July 25, 2017

ನೀ ನಗುವ ಮುನ್ನ ಕರೆಯೊಂದ ಕೊಡು



ನನ್ನದೊಂದು ಅಹವಾಲಿಹುದು ಗೆಳತಿ
ನೀ ನಗುವ ಮುನ್ನ ಕರೆಯೊಂದ ಕೊಡು
ಆ ನಿನ್ನ ನಗುವಲ್ಲಿ ಮುತ್ತು ಎಣಿಸುವೆ

ಎಲ್ಲಿಯೂ ಜಾಗ ಕಾಣದಾಗಿದೆ
ನನ್ನೆದೆಯ ನೀ ಆವರಿಸಿದ ತರುವಾಯ
ನಿನ್ನ ಕಣ್ಣ ಕಾಂತಿಯಲ್ಲಿ
ಕಂಗೊಳಿಸುವೆ ನಾನು
ಕುಡಿನೋಟವ ಬೀರೊಮ್ಮೆ ನನ್ನೆದೆಯ ತಾಕಿ

ಹರ್ಷದ ಹೊನಲು ನಿನ್ನ ಸನಿಹ
ನಿನಗಿಲ್ಲ ಇನ್ನು ದಿಗಿಲು
ನಾ ನಿನ್ನವನಾದ ತರುವಾಯ
ಮೋಡಗಳು ನಾಚಿ ನಗುತಿದೆ ನೋಡಲ್ಲಿ
ನಮ್ಮಿಬ್ಬರ ಕಂಡು
ಉತ್ಕರ್ಷವಾಗಿ ಮಳೆಯ ಸಿಂಚನ
ಅದು ನಮ್ಮ ಪ್ರೇಮದ ದರ್ಪಣ

- ಅ.ರಾ.ತೇ

Wednesday, June 28, 2017

ಜೀವನದ ನಗು


ಜೀವನವೆಂದರೆ
ಜೀವದೊಟ್ಟಿಗೆ ನಡೆಸುವ ಸಮರ
ಜೀವದ ಉಳಿಕೆ ಅಲ್ಪವೆ ಆದರೂ
ಜೀವನದ ಸಾಧನೆ ಅಮರ..

ಜಗವೆಲ್ಲ ಜರೆದರು
ಜಾರಬಾರದು ನಮ್ಮಯ ನಂಬಿಕೆ
ಜುಲುಮೆ ಜನಗಳ ಭಂಟ
ಜುಮ್ಮನೆ ಎರಗುವರು ಅದನಿಡಿದು..

ಜಾತಿ-ಬೇಧವ ಕಿತ್ತೆಸೆದು
ಜೈಸಬೇಕು ಮಾನವರಾಗಿ
ಜಂಗಿಡಿದ ಭಾವವ ತಳ್ಳಿ
ಜಿನುಗಿಸೋಣ ನಗುವ ಜಡವ ಮೀರಿ

- ಅ.ರಾ.ತೇಜಸ್
ಬರೆದ್ದದ್ದು - ೩೦/೦೩/೨೦೧೩
ವಿಶೇಷ: ಪ್ರತಿ ಸಾಲು ’ಜ’ ಅಕ್ಷರದ ಪದಗಳಿಂದ ಶುರುವಾಗಿದೆ

Sunday, June 11, 2017

ಸುರಾಂಗನೆ

ನಾಚುತ್ತಾಳೆ ತನ್ನ ಕಣ್ಣಂಚಿನಲ್ಲೆ
ನನ್ನ ಕಾಣುವ ಕ್ಷಣವೆಲ್ಲವೂ..
ನಾ ಸಂಭ್ರಮಿಸುತ್ತೇನೆ ಅವಳ
ಇರುವಿಕೆಯನ್ನು
ತುಟಿಯ ಪದರಗಳ ಸರಸಿ ಇಣುಕುವ
ತುಂಟ ನಗುವೇ ನನ್ನ ಜೀವಾಳ..

ಮೌನದಲ್ಲೆ ಹೆಚ್ಚು ಸಮಯ ಕಳೆಯುತ್ತೇವೆ
ಅಲ್ಲೆ ನಮ್ಮ ಹೆಚ್ಚಿನ ಸಂಭಾಷಣೆ ನಡೆದಿರುತ್ತದೆ
ಅವಳ ಹೃದಯಬಡಿತವೇ ನನ್ನಿಷ್ಟದ ಸಂಗೀತ..
ಆ ಚೆಂದದ ಕಪೋಲಗಳ ನಡುವೆ
ಅಸ್ತಂಗತವಾಗದ ರವಿ
ಅದನುರಿಸುವ ನಾನು..

ನಲ್ಲೆ, ನಿನ್ನ ಅನುರಾಗದ ಹಾಡು
ಉಸಿರಾಟದ ತಾಳ
ಅದನಾಲಿಸುವ ನಿನ್ನ ಪ್ರೇಮ ಆರಾಧಕ
ದಿನವು ನಮ್ಮದೆ ಸಂಗೀತ ಗೋಷ್ಠಿ..
ಪ್ರತಿ ನೋಟದಲ್ಲೂ
ಅನುಕರ್ಷಿಸುವೆ ಬಿಡದೆ
ನಿನ್ನ ಸೊಬಗ ಬಣ್ಣಿಸಲಾಗದೆ
ಸೋಲುವೆ ಓಮ್ಮೊಮ್ಮೆ ಪದಗಳ ಮರೆತು
ನೀನು ಸುರಾಂಗನೆ..

ಅ.ರಾ.ತೇ

Tuesday, March 21, 2017

ದೀಪ - ಆಲಾಪ


ಮನದ ಗೋಡೆಯ ಮಧ್ಯೆ
ಬಂಧಿಗಳು ನಾವು
ಸುತ್ತ ಮುತ್ತಲಿನ ಪ್ರಪಂಚವೆಲ್ಲವೂ
ಬರಿ ಅಸೂಯೆ, ದ್ವೇಷ, ಕುಹಕ,
ಸಣ್ಣತನಗಳೆ!
ಸಂತಸಕ್ಕೂ ಬೇಲಿ ಅಲ್ಲಿ
ಪರರ ನಿಂದಿಸಿ ಗಳಿಸಿದವುಗಳಷ್ಟೆ..

ಕಿಟಕಿಗಳು ನೂರಾರು
ಮನದ ಅರಮನೆಗೆ
ಇಣುಕುವೆವು ಕಗ್ಗತ್ತಲ ರಾತ್ರಿಯಲ್ಲೂ
ಕಿಟಕಿ ಸಂದುಗಳಲ್ಲಿ ನಮ್ಮದೆ ಮುಖವಾಡ
ತೊಟ್ಟು ನಗುವೆವು ಹಿಂದೆ ನಿಂತು..

ಕಿಟಕಿಯ ಆಚೆಗೆ
ಇಹುದೊಂದು ಪ್ರಪಂಚ
ಗೋಡೆಗಳ ಕಟ್ಟಿ ಬದುಕೋರೆ ಹೆಚ್ಚಲ್ಲಿ
ಬಯಲ ಬದುಕಿನ ಅರಿವು ಅವರಿಗೆಲ್ಲಿ?

ಜಗತ್ತು ವರ್ಣರಂಜಿತ
ಮನಗಳ ಸಮೇತ!
ನಗ್ನತೆಯ ಭಾವ ತೀರ ಅಪರೂಪ
ಹೊತ್ತು ಕುಣಿವರು ಇಲ್ಲಿ
ಸಾಕುಸಾಕೆಂಬಷ್ಟು!!
ಎಷ್ಟಿದ್ದರೇನಂತೆ ಅಂತಸ್ತು ನಮ್ಮಲ್ಲಿ
ಅಂತಃಕರಣವು ಬರಿದಾದ ಮೇಲೆ..

ಮುಚ್ಚಿದ ಕಿಟಕಿಗಳು ತೆರೆಯಲಿ ಒಂದೊಂದೆ
ಬೇಡದ ಬಣ್ಣ ಮಾಸಲಿ, ಜೀವನವು ಹೊಳೆಯುತ್ತ
ಬೆಳಗಲಿ ದೀಪ
ಆಗಿ ಹೊಸ ಜೀವನಕ್ಕೊಂದು ಆಲಾಪ..

- ಅ.ರಾ.ತೇಜಸ್

PC : Mahathi Rao

Thursday, February 16, 2017

ಅರಳದ ಕಮಲ - ಸತ್ತ ಭ್ರಮರ

ಅಲ್ಲಿ ಕಣ್ಣಿತ್ತು, ಕಿವಿಯಿತ್ತು, ಮೂಗಿತ್ತು
ತುಟಿಯ ಅಂಚಲ್ಲಿ ನಗುವಿರಲಿಲ್ಲ
ಬೆತ್ತಲಾಗಿತ್ತು ದೇಹ
ತನ್ನದೆ ಆತ್ಮಸಾಕ್ಷಿಯ ವಂಚಿಸಿಕೊಂಡು

ಮನದಲ್ಲೇನೋ ಜೋರು ಮೂಕ ರಾಗ
ಹೊಮ್ಮುತಿದೆ
ಗಂಟಲಲ್ಲಿ ಶಕ್ತವಿರಬೇಕಲ್ಲ ಹಾಡಲು!!
ದೇಹ ಕಂಪಿಸುತ್ತದ್ದೆ
ಅವಳ ದನಿ ಕೇಳಿದಂತೆಲ್ಲ
ಎಲ್ಲಿ ಅವಳು?

ಇನ್ನಿಲ್ಲದ ಅವಳನ್ನು
ಹುಡುಕುವುದಾದರೂ ಎಲ್ಲಿ??
ನನ್ನಲ್ಲೆ, ಇನ್ನೆಂದೂ ಅರಳದ
ಮನದ ಕಮಲದಲ್ಲಿ
ಬಂಧಿಯಾದವಳು!
ಅದರ ಸುತ್ತ ತಿರುಗುವ
ಸತ್ತ ಭ್ರಮರ ನಾನು

Tuesday, February 7, 2017

ಹೀಗೊಂದು ಕವಿತೆ..

ಕಛೇರಿಯ ಕಿಟಕಿಯಲ್ಲಿ
ಕುಡಿದು ಮುಗಿಸಿದ ಕಾಫಿ ಲೋಟ
ಪಕ್ಕದಲ್ಲಿ ಬಂದು ಕೂತ ಹಕ್ಕಿ
ಅದರ ಕೊರಳಿಗೆ ನನ್ನ ಕವಿತೆ ಸಿಕ್ಕಿಸಿದೆ
ಮರುಗಳಿಗೆ ಹಾರಿ ಹೋಯಿತು ಆಗಸದೆಡೆಗೆ..

ಕೆಲಸದ ಒತ್ತಡದಲ್ಲಿ ಕವಿತೆಯ
ಬಗ್ಗೆಯೆ ಮರೆತೆ
ನನ್ನ ಬಳಿ ಇದ್ದಾಗಂತು ಉಪವಾಸದಲ್ಲೆ ಇತ್ತು
ಇನ್ನು ಆ ಪುಟ್ಟ ಹಕ್ಕಿ ಏನು ತಿನ್ನಿಸಿತು?

ನಾಲ್ಕು ಗೋಡೆಯ ಮಧ್ಯೆ
ಎಷ್ಟೋ ಅಪೂರ್ಣ ಕವಿತೆ ನನ್ನ ಸುತ್ತ
ಒದ್ದಾಡುತ್ತಲೆ ಇವೆ
ಇನ್ನು ಆ ಎಳೆಯ ಕವಿತೆ
ಬೀದಿ ಸುತ್ತುತ್ತ ಎಂದೋ ಸತ್ತಿರಬೇಕು

ಅಚಾನಕ್ಕಾಗಿ ಒಂದು ದಿನ
ಆಗಸದೆಡೆಗೆ ಇಣುಕಿದಾಗ ಕಾದಿತ್ತಲ್ಲ ಅಚ್ಚರಿ!!
ಎಲ್ಲೆಲ್ಲೂ ಕವಿತೆ ಕುಣಿಯುತ್ತಿವೆ
ಹಕ್ಕಿಗಳ ಸಂತಸಕ್ಕೆ ಪರಿವೇ ಇಲ್ಲ

ಅಲ್ಲಿ ಹರ್ಷದ ಹೊನಲ ಕಂಡೆ
ಬಹು ದಿನಗಳಾಗಿದ್ದವು ನಾ ಮನತುಂಬಿ ನಕ್ಕು
ಬಿದ್ದೋಡಿದೆ ಹಿಂದಕ್ಕೆ
ನಾಲ್ಕು ಗೋಡೆಯ ಮಧ್ಯೆ ನಿದ್ರಿಸಿದ್ದ
ಎಲ್ಲಾ ಕವಿತೆಗಳ ತಂದು
ಆಗಸದೆಡೆಗೆ ಬಿಸಾಡಿದೆ
ಆಗ ಅಲ್ಲೊಂದು ಚೆಂದದ ಕವಿತೆ ಮೂಡಿತ್ತು
ಅದೇ ಹಕ್ಕಿ ನ್ನನ್ನತ್ತ ತಂದು
ರೆಕ್ಕೆ ಬಡಿಯುತ್ತ ಮರೆಯಾಯಿತು!!

- ಅ.ರಾ.ತೇ