ನಾಚುತ್ತಾಳೆ ತನ್ನ ಕಣ್ಣಂಚಿನಲ್ಲೆ
ನನ್ನ ಕಾಣುವ ಕ್ಷಣವೆಲ್ಲವೂ..
ನಾ ಸಂಭ್ರಮಿಸುತ್ತೇನೆ ಅವಳ
ಇರುವಿಕೆಯನ್ನು
ತುಟಿಯ ಪದರಗಳ ಸರಸಿ ಇಣುಕುವ
ತುಂಟ ನಗುವೇ ನನ್ನ ಜೀವಾಳ..
ಮೌನದಲ್ಲೆ ಹೆಚ್ಚು ಸಮಯ ಕಳೆಯುತ್ತೇವೆ
ಅಲ್ಲೆ ನಮ್ಮ ಹೆಚ್ಚಿನ ಸಂಭಾಷಣೆ ನಡೆದಿರುತ್ತದೆ
ಅವಳ ಹೃದಯಬಡಿತವೇ ನನ್ನಿಷ್ಟದ ಸಂಗೀತ..
ಆ ಚೆಂದದ ಕಪೋಲಗಳ ನಡುವೆ
ಅಸ್ತಂಗತವಾಗದ ರವಿ
ಅದನುರಿಸುವ ನಾನು..
ನಲ್ಲೆ, ನಿನ್ನ ಅನುರಾಗದ ಹಾಡು
ಉಸಿರಾಟದ ತಾಳ
ಅದನಾಲಿಸುವ ನಿನ್ನ ಪ್ರೇಮ ಆರಾಧಕ
ದಿನವು ನಮ್ಮದೆ ಸಂಗೀತ ಗೋಷ್ಠಿ..
ಪ್ರತಿ ನೋಟದಲ್ಲೂ
ಅನುಕರ್ಷಿಸುವೆ ಬಿಡದೆ
ನಿನ್ನ ಸೊಬಗ ಬಣ್ಣಿಸಲಾಗದೆ
ಸೋಲುವೆ ಓಮ್ಮೊಮ್ಮೆ ಪದಗಳ ಮರೆತು
ನೀನು ಸುರಾಂಗನೆ..
ಅ.ರಾ.ತೇ
No comments:
Post a Comment