Tuesday, February 7, 2017

ಹೀಗೊಂದು ಕವಿತೆ..

ಕಛೇರಿಯ ಕಿಟಕಿಯಲ್ಲಿ
ಕುಡಿದು ಮುಗಿಸಿದ ಕಾಫಿ ಲೋಟ
ಪಕ್ಕದಲ್ಲಿ ಬಂದು ಕೂತ ಹಕ್ಕಿ
ಅದರ ಕೊರಳಿಗೆ ನನ್ನ ಕವಿತೆ ಸಿಕ್ಕಿಸಿದೆ
ಮರುಗಳಿಗೆ ಹಾರಿ ಹೋಯಿತು ಆಗಸದೆಡೆಗೆ..

ಕೆಲಸದ ಒತ್ತಡದಲ್ಲಿ ಕವಿತೆಯ
ಬಗ್ಗೆಯೆ ಮರೆತೆ
ನನ್ನ ಬಳಿ ಇದ್ದಾಗಂತು ಉಪವಾಸದಲ್ಲೆ ಇತ್ತು
ಇನ್ನು ಆ ಪುಟ್ಟ ಹಕ್ಕಿ ಏನು ತಿನ್ನಿಸಿತು?

ನಾಲ್ಕು ಗೋಡೆಯ ಮಧ್ಯೆ
ಎಷ್ಟೋ ಅಪೂರ್ಣ ಕವಿತೆ ನನ್ನ ಸುತ್ತ
ಒದ್ದಾಡುತ್ತಲೆ ಇವೆ
ಇನ್ನು ಆ ಎಳೆಯ ಕವಿತೆ
ಬೀದಿ ಸುತ್ತುತ್ತ ಎಂದೋ ಸತ್ತಿರಬೇಕು

ಅಚಾನಕ್ಕಾಗಿ ಒಂದು ದಿನ
ಆಗಸದೆಡೆಗೆ ಇಣುಕಿದಾಗ ಕಾದಿತ್ತಲ್ಲ ಅಚ್ಚರಿ!!
ಎಲ್ಲೆಲ್ಲೂ ಕವಿತೆ ಕುಣಿಯುತ್ತಿವೆ
ಹಕ್ಕಿಗಳ ಸಂತಸಕ್ಕೆ ಪರಿವೇ ಇಲ್ಲ

ಅಲ್ಲಿ ಹರ್ಷದ ಹೊನಲ ಕಂಡೆ
ಬಹು ದಿನಗಳಾಗಿದ್ದವು ನಾ ಮನತುಂಬಿ ನಕ್ಕು
ಬಿದ್ದೋಡಿದೆ ಹಿಂದಕ್ಕೆ
ನಾಲ್ಕು ಗೋಡೆಯ ಮಧ್ಯೆ ನಿದ್ರಿಸಿದ್ದ
ಎಲ್ಲಾ ಕವಿತೆಗಳ ತಂದು
ಆಗಸದೆಡೆಗೆ ಬಿಸಾಡಿದೆ
ಆಗ ಅಲ್ಲೊಂದು ಚೆಂದದ ಕವಿತೆ ಮೂಡಿತ್ತು
ಅದೇ ಹಕ್ಕಿ ನ್ನನ್ನತ್ತ ತಂದು
ರೆಕ್ಕೆ ಬಡಿಯುತ್ತ ಮರೆಯಾಯಿತು!!

- ಅ.ರಾ.ತೇ

1 comment: