Friday, September 6, 2024

ಜಿಹಾಸೆ!!


ಅವನಲ್ಲಿ ಭಯ ಆವರಿಸಿದೆ
ಎಲ್ಲಿ ತನ್ನೆಲ್ಲವ ಕಳೆದುಕೊಳ್ಳುತ್ತೇನೆಂದು
ಮತ್ತೆ ಮತ್ತೆ ನೋಡಿಕೊಳ್ಳುತ್ತ ತನ್ನದೆ ಜಿಹಾಸೆಗಳ..
ಒಂಟಿ ಕಾಲಿನ ಮೇಲೆ ಕಸರತ್ತು ಬೇರೆ
ಫ್ಲೆಮಿಂಗೊನಂತೆಯೇ, ತನ್ನ ಒಂದರ್ಧ
ಆಸೆಗಳ ಒಣಗಿಸಿಕೊಳ್ಳಲು..

ನಾಣ್ಯ ನೆಲವ ತಾಗಿದಾಗ
ಹೊಮ್ಮುವ ಸದ್ದು ನಶಿಸುವ ಮುಂಚೆಯೇ
ಇವನು ದಡ ತಲುಪುವ ತವಕದಲ್ಲಿ
ಮತ್ತದೆ ಹಳೆಯ ರಾಗ ಮೂಕವಾಗಿಸುತ್ತದೆ
ಹಿಂದೆ ತಿರುಗುವ ಬಗ್ಗೆ ದ್ವಂದ್ವ!
ದ್ರುತನಾಗುತ್ತಾನೆ ದಾರಿತಪ್ಪಿದ ದಿಕ್ಕಿನಲ್ಲಿ..

ಆದರೂ ಎಂಥದ್ದೋ ವಿಶ್ವಾಸ
ಮತ್ತೆ ಮತ್ತೆ ಅದೇ ಚಪ್ಪಲಿ ತೊಟ್ಟು
ಕಾಲೆಳೆಯುತ್ತಾನೆ ಪಕ್ಕದ ಬೀದಿಗೆ ಬೆಕ್ಕಿನಂತೆ
ಎಷ್ಟೇ ನಾಯಿಗಳು ಅಟ್ಟಿದರು!
ಯಾರಿಗೂ ಕಾಯದಿದ್ದಾಗ ಯಾರೊಬ್ಬರೋ ಸಿಕ್ಕು
ಏನಿಲ್ಲಿ ಎಂದರೆ? ಚಪ್ಪಲಿ ಸವೆದಿರುವುದನ್ನು ಹೇಳದೆ
ಗೊಳ್ಳನೆ ನಕ್ಕು ಸುಮ್ಮನೆ ಮುಂದೋಗುತ್ತಾನೆ..

-ಅ.ರಾ.ತೇಜಸ್

No comments:

Post a Comment