ಮನೆಯ ಕಿಟಕಿಯ ಆಚೆ
ಇರಲೇ ಬೇಕಿಲ್ಲ ಕಡಲು!
ಮನೆಯ ಒಳಗಿನ ಮನಗಳ ನಡುವೆ
ಇದ್ದರೆ ಸಾಕು ಅನ್ಯೋನ್ಯತೆಯ ಹೊನಲು
ಅಲೆಯ ಸದ್ದೇ ಬೇಕೆ ಮಲಗಲು?
ಮೌನವು ಸಾಕು ಜೊತೆಗಿರುವ ಮನಗಳು
ಅರಿತರಲು..
ಬೇಕೆಂದಿಲ್ಲ ಕೋಟಿಯ ಮನೆಯು,
ಬಿರುಕು ಬಿಟ್ಟ ಗೋಡೆಗಳ ಒಳಗೆ
ಬೆಂಬಿಡದೆ ಪ್ರೀತಿಸುವ ಹೃದಯಗಳು
ಅರಮನೆಯು..
ನೆಟ್ಟ ಗಿಡ ಹೂ ಬಿಡಬಹುದು ಅಷ್ಟೇ
ಅದು ನಗುವುದು ನೀರೆರೆದ ಮನಸ್ಸು
ಆತ್ಮತೃಪ್ತವಿದ್ದಾಗ ಮಾತ್ರ
ಕಿಟಕಿಯ ಗಾಜು ಒಡೆಯಬಹುದು
ಬಾಗಿಲು ಬೀಳಬಹುದು
ಸುಣ್ಣ-ಬಣ್ಣ ಕೀಳಬಹುದು
ಗಿಡವು ಒಣಗಬಹುದು,
ಪ್ರೀತಿಯಿಂದ ಇರುವ ಮನಗಳಿಗೂ
ಇವೆಲ್ಲವೂ ಆಗಬಹುದು, ಆದರೂ
ಮರಳಿ ಮರಳಿ ಜೊತೆಯಾಗುವ
ಮನವು ಹೊರಳಿ ಬೇಕೆನ್ನುವ
ಹೃದಯಗಳ ಬಿಗಿತವೆ
ಅಳಿಸಿ ಹೋಗದ ಸಾಂಗತ್ಯ ಕಾವ್ಯ..
- ಅ. ರಾ. ತೇಜಸ್
No comments:
Post a Comment