Thursday, August 31, 2017

ನಲ್ಮೆಯೊಂದೆ ಹೆಸರು







ನಿನ್ನ ತುಟಿ ಅಂಚಿನ ತಂತಿಯ
ಮೀಟುವ ನಾನು
ಪ್ರತಿ ಬಾರಿಯು ಹೊಸ ನಾದವ
ಹೊಮ್ಮಿಸುತ್ತಲೆ ಇರುವೆ

ಅದೆಂಥ ಸವಿ ಸೊಗಸು
ನಿನ್ನ ಕಿರುಬೆರಳು ತಾಕಿದಾಗ
ನನ್ನ ಎದೆಗೊರಗಿ ನೀ ನಾಚಿದಾಗ!!
ಕಣ್ಣುಗಳು ಬೆರೆತಾಗ
ಮೌನವೇ ನೇಪಥ್ಯ
ಆಗ ನಡೆಯುವ ಸಂಭಾಷಣೆಯೊಂದೆ
ಜೀವನದ ಸತ್ಯ..

ಕದ್ದು ನೋಡಬೇಡ  ಹಿಂದೆ ತಿರುಗಿ
ಬಿದ್ದೆ ಬೀಳುವೆ ಮರುಳಾಗಿ
ಉಪೇತವಾಗಿದೆ ತಳಮಳವು
ನೀ ಸನಿಹವಿರದ ಪ್ರತಿ ಕ್ಷಣವು..

ತೋಳಬಂಧಿಯಾಗಿಬಿಡು ಈ ನಿಮಿಷ
ವಿರಹವ ನೀಗಿಸು ಇಲ್ಲಿಯೇ
ಉಸಿರಾಟದ ವೇಗ ಹೆಚ್ಚಾಗುವ ಗಳಿಗೆಗೆ
ಹೃದಯಬಡಿತ ಸ್ಪರ್ಧೆಯ ನೀಡುತಿದೆ
ಈ ಅನವರತ  ಅನುಭಾವಕ್ಕೆ
ನಲ್ಮೆಯೊಂದೆ  ಹೆಸರು..

- ಅ.ರಾ.ತೇ
#ಎಂಎಚ್

Monday, August 21, 2017

ಅನುರಕ್ತೆ

ನಲ್ಲೆ ನಿನ್ನ ಸನಿಹ ನಿಂತು
ಮರೆವೆನು ನನ್ನೆ ನಾನು
ಹೃದಯ ಬಡಿತ ಏರುಪೇರು
ನೀ ನಗುವ ಕ್ಷಣವೆಲ್ಲವೂ..

ನೀನು ಅನುರಕ್ತೆ
ಮೋಹಿಸುವೆ ನನ್ನ, ಕಣ್ಣ ಸಂಚಲ್ಲಿ
ಅಡಗಲಿ ಇನ್ನೆಲ್ಲಿ?
ಕನಸಲು ಬಿಡದೆ ಮುದ್ದಿಸುವಾಗ
ನೀ ನಾಚುವ ಪರಿಗೆ
ಕಪೋಲಗಳು ಕೆಂಪಾಗಿವೆ
ಸಂಜೆಯ ಸೂರ್ಯ ಅಲ್ಲೆ ಮರೆಯಾದ!!

ದೂರದ ಊರಲಿ ಎಲ್ಲೋ ಮಳೆಯಂತೆ
ನನಗಿಲ್ಲಿ ಚುಂಬನದ ಧಾರೆ
ಮನದಿ ವಿದ್ಯುಲ್ಲತೆ
ನಿನ್ನ ಬಿಗಿಸಪ್ಪುಗೆಯಲಿ ಕೈಸೆರೆ

ಸಂಚಿತವಾಗಿದೆ ಪ್ರತಿ ನಿಮಿಷ
ಮನಗಳು ಬೆರೆತ ತರುವಾಯ
ಉಳಿದಿವೆ ಅಗಣಿತ ಕವಿತೆಗಳು
ಹೇಳದೆ ಹೋದರೆ ನಿರುಪಾಯ
ಹಾಡಿತು ಕೆಂದುಟಿ ನಡಗುತಲೆ
ಸಿಹಿಯೇ ಇನ್ನು ಈ ಸಮಯ..

- ಅ.ರಾ.ತೇ
#ಎಂಎಚ್  #21/08/2017
 

Wednesday, August 16, 2017

ಕಾಯುತ ಕೂತ ಹೃದಯವಿದು

ಇನ್ನೇನು ಕೆಲಸವಿದೆ ನನಗೆ
ನಿನ್ನ ಪ್ರೀತಿಸುವುದ ಬಿಟ್ಟು
ತೋಚದೆ ಹೋದರು ಬರೆಯುವೆನು
ನಿನಗಾಗಿ ಪದಗಳ ಕೂಡಿಟ್ಟು

ಕಾಯಿಸಿ ನನ್ನೆದೆ ನೋಯಿಸದಿರು
ಕಾಯುತ ಕೂತ ಹೃದಯವಿದು
ನಿನ್ನಯ ನಗುವಿನ ಗೊಂಚಲ ಹಿಡಿದು
ಮುದ್ದಿಸುವೆ ಜಗವನೆ ಮರೆತು

ಪ್ರೇಮದ ಪತ್ರ ಕೊಟ್ಟೆನು ನಿನಗೆ
ಸಿಹಿ ಮುತ್ತನು ಕೊಟ್ಟು ಗೀಚಿದೆ ನನ್ನೆದೆಗೆ
ದಿಮ್ಮನೆ ಮೂಡುವ ನೆನಪಿನ ಸುತ್ತ
ಇರುವುದು ಒಂದೇ ನಿನ್ನಯ ಚಿತ್ರ

ಸಂಭ್ರಮದ ಮಳೆಯೇ ತುಂಬಿದೆ ಈಗ
ಭಾವಗಳ ಬಾಂಧವ್ಯದಲಿ
ಪ್ರೀತಿಯ ಧಾರೆಲಿ ಮುಳುಗಿದ ನಮಗೆ
ಅನುಕ್ಷಣವು ಸಮ್ಮಿಲನದ ಗಳಿಗೆ

- ಅ.ರಾ.ತೇ
#MH #16/08/17