Wednesday, June 28, 2017

ಜೀವನದ ನಗು


ಜೀವನವೆಂದರೆ
ಜೀವದೊಟ್ಟಿಗೆ ನಡೆಸುವ ಸಮರ
ಜೀವದ ಉಳಿಕೆ ಅಲ್ಪವೆ ಆದರೂ
ಜೀವನದ ಸಾಧನೆ ಅಮರ..

ಜಗವೆಲ್ಲ ಜರೆದರು
ಜಾರಬಾರದು ನಮ್ಮಯ ನಂಬಿಕೆ
ಜುಲುಮೆ ಜನಗಳ ಭಂಟ
ಜುಮ್ಮನೆ ಎರಗುವರು ಅದನಿಡಿದು..

ಜಾತಿ-ಬೇಧವ ಕಿತ್ತೆಸೆದು
ಜೈಸಬೇಕು ಮಾನವರಾಗಿ
ಜಂಗಿಡಿದ ಭಾವವ ತಳ್ಳಿ
ಜಿನುಗಿಸೋಣ ನಗುವ ಜಡವ ಮೀರಿ

- ಅ.ರಾ.ತೇಜಸ್
ಬರೆದ್ದದ್ದು - ೩೦/೦೩/೨೦೧೩
ವಿಶೇಷ: ಪ್ರತಿ ಸಾಲು ’ಜ’ ಅಕ್ಷರದ ಪದಗಳಿಂದ ಶುರುವಾಗಿದೆ

Sunday, June 11, 2017

ಸುರಾಂಗನೆ

ನಾಚುತ್ತಾಳೆ ತನ್ನ ಕಣ್ಣಂಚಿನಲ್ಲೆ
ನನ್ನ ಕಾಣುವ ಕ್ಷಣವೆಲ್ಲವೂ..
ನಾ ಸಂಭ್ರಮಿಸುತ್ತೇನೆ ಅವಳ
ಇರುವಿಕೆಯನ್ನು
ತುಟಿಯ ಪದರಗಳ ಸರಸಿ ಇಣುಕುವ
ತುಂಟ ನಗುವೇ ನನ್ನ ಜೀವಾಳ..

ಮೌನದಲ್ಲೆ ಹೆಚ್ಚು ಸಮಯ ಕಳೆಯುತ್ತೇವೆ
ಅಲ್ಲೆ ನಮ್ಮ ಹೆಚ್ಚಿನ ಸಂಭಾಷಣೆ ನಡೆದಿರುತ್ತದೆ
ಅವಳ ಹೃದಯಬಡಿತವೇ ನನ್ನಿಷ್ಟದ ಸಂಗೀತ..
ಆ ಚೆಂದದ ಕಪೋಲಗಳ ನಡುವೆ
ಅಸ್ತಂಗತವಾಗದ ರವಿ
ಅದನುರಿಸುವ ನಾನು..

ನಲ್ಲೆ, ನಿನ್ನ ಅನುರಾಗದ ಹಾಡು
ಉಸಿರಾಟದ ತಾಳ
ಅದನಾಲಿಸುವ ನಿನ್ನ ಪ್ರೇಮ ಆರಾಧಕ
ದಿನವು ನಮ್ಮದೆ ಸಂಗೀತ ಗೋಷ್ಠಿ..
ಪ್ರತಿ ನೋಟದಲ್ಲೂ
ಅನುಕರ್ಷಿಸುವೆ ಬಿಡದೆ
ನಿನ್ನ ಸೊಬಗ ಬಣ್ಣಿಸಲಾಗದೆ
ಸೋಲುವೆ ಓಮ್ಮೊಮ್ಮೆ ಪದಗಳ ಮರೆತು
ನೀನು ಸುರಾಂಗನೆ..

ಅ.ರಾ.ತೇ