Wednesday, October 21, 2015

ನಾ ನಿತ್ರಾಣನೆ ಇನ್ನು! ಆ ಪ್ರೀತಿ ಭರಿಸಲು..



ಭಾವನೆಗಳು ಕೆಲವೊಮ್ಮೆ ಕದಲಾಡುತ್ತದೆ
ಬಿಗು ಮನದ ತೊಳಲಾಟಕ್ಕೆ
ಅದು ಅಲ್ಪ! ವಿರಹದ ವೇದನೆ..
ಅವಳ ಮುತ್ತಿನ ಮೊಹರು ಅಚ್ಚಾಗಿದೆ
ಈ ಪುಟ್ಟ ಎದೆಯಲಿ
ನಾ ನಿತ್ರಾಣನೆ ಇನ್ನು! ಆ ಪ್ರೀತಿ ಭರಿಸಲು..



ಮೊನ್ನೆ ನಡು ರಾತ್ರಿಯಲ್ಲಿ
ಎಚ್ಚರಿಸಿದ ನಿನ್ನ ಪರಿ
ಕನಸೆಂದು ನಂಬಲಾರೆ
ನಿನ್ನ ಮರೆಯಲು ಆಗದ ಪ್ರತಿ ಕ್ಷಣದ
ಉದಾಹರಣೆಯದು..
ನೀನಿನ್ನು ಅಪರಾಧಿಯೆ
ನನ್ನಲ್ಲಿ ಶಾಶ್ವತ ಬಂಧನಕ್ಕೊಳಗಾದ ಮೇಲೆ..



ಇನ್ನು ಪ್ರಮತ್ತನಾಗಿದ್ದೇನೆ
ಆ ಪರಿಯ ಪ್ರೇಮಕ್ಕೆ!!
ಹಾಗೆ ನಸು ನಾಚಬೇಡ, ನೋಡಿಲ್ಲಿ
ಯಾವುದೂ ಭ್ರಮೆಯಲ್ಲ
ಬೆಸೆದ ಅನುರಾಗದ ಮತ್ತಿನ ಭಾವವಷ್ಟೆ..
ಕಠಿಣ ಪೈಪೋಟಿ ಇನ್ನು
ಯಾರು ಯಾರನ್ನು ಗೆಲ್ಲುತ್ತಾರೆಂದು
ನಿನ್ನೆದುರು ಸೋಲೆ ಚೆಂದ..
-ಅ.ರಾ.ತೇ

Wednesday, January 21, 2015

ಪ್ರೀತಿಯ ತುಳುಕು..

ಅವಳು ಸೆಳೆವು
ಬಾರಿ ರಭಸವಿದೆ! ಅಬ್ಬಾ!
ಮತ್ತೆ ಮತ್ತೆ ನನ್ನನ್ನು ಸೆಳೆದುಕೊಳ್ಳುತ್ತಾಳೆ
ತನ್ನೊಳಗೆ
ಎಷ್ಟೆ ಪ್ರಯತ್ನಿಸಿದರೂ ಬಿಡಿಸಿಕೊಳ್ಳಲಾರೆ
ನಾನು ಆವೃತ..


ನಾನೀಗ ಬಂಡೆ
ಅವಳು ಅಲೆ
ಎಷ್ಟೊಂದು ಮುತ್ತು
ಪದೇ ಪದೇ! ಬಿಡಲಾರದೆ
ಕರಗಲು ಎಷ್ಟೆಲ್ಲಾ ಸಮರ
ಇಬ್ಬರು ಬಹಳ ಮೊಂಡೆ..

ನಿಲ್ಲದ ಜತನ
ಬಿಡಿಸಿಕೊಳ್ಳಲು! ಸುಲಭವಲ್ಲ
ನಾನು ಬಲೆ ಅಲ್ಲವೇ
ಅವಳು ಮೀನು
ಒದ್ದಾಟ ಕೇವಲ ಅಭಿನಯ
ಪ್ರೀತಿಯ ತುಳುಕು..

ಅದೇ ಸ್ಪಂದನ
ಅದೇ ಚುಂಬನ
ನವಿರೇಳುವ ಆಲಿಂಗನ

ಅದೇ ಹಾಸ್ಯ
ಅದೇ ಲಾಸ್ಯ
ಬೆರೆತ ಸಿಹಿ ಆಲಸ್ಯ

ಒಂದಷ್ಟು ಹೂ ಚಲ್ಲಿದೆ ಅಲ್ಲಿ
ಎಣಿಸಿದಷ್ಟು ಅದರ ಘಮಲು ಹೆಚ್ಚುತಿದೆ
ನನ್ನ ಅಧರದ ಬಂಧಿ ಇನ್ನು..