Monday, November 14, 2011

ಮಕ್ಕಳ ದಿನಾಚರಣೆ - ನಿಜವಾದ ಹಬ್ಬವಾಗುವುದು ಹೇಗೆ?


ಇಂದು ಮಕ್ಕಳ ದಿನಾಚರಣೆ. ಮಕ್ಕಳ ದಿನಾಚರಣೆಯು ಕೇವಲ ಶಾಲೆಗಳಲ್ಲಿ ನೆಹರು ಭಾವಚಿತ್ರವಿಟ್ಟು, ದೀಪವಚ್ಚಿ, ಕೆಲವು ನಿಮಿಷಗಳ ಕಾಲ ಭಾಷಣವನ್ನು ಮಾಡಿ, ಒಂದೆರಡು ಹಿತವಚನ ಹೇಳಿ, ಸಿಹಿ ಹಂಚಿ, ಕೆಲವು ಸ್ಪರ್ಧೆ ನಡೆಸಿ, ಪ್ರಶಸ್ತಿ ಕೊಟ್ಟು ಮುಗಿಸಿದರೆ ಮಕ್ಕಳ ದಿನಾಚರಣೆ ಮುಗಿದಂತೆ ಶಾಲೆಗಳಲ್ಲಿ. ಪತ್ರಿಕೆಗಳಲ್ಲಿ ಕೆಲವಾರು ಲೇಖನಗಳು, ದೂರದರ್ಶನಗಳಲ್ಲಿ ಹಲವಾರು ಕಾರ್ಯಕ್ರಮಗಳು ಮಕ್ಕಳ ದಿನಾಚರಣೆಗೆ ಹಬ್ಬದ ಮೆರಗನ್ನು ನೀಡುತ್ತದೆ. ಮಕ್ಕಳ ದಿನಾಚರಣೆಯು ಹಬ್ಬವೇ. ಆದರೆ ಆ ಹಬ್ಬ ಎಲ್ಲರೂ ಆಚರಿಸವಂತಿರಬೇಕು, ಎಲ್ಲರಿಗೂ ಅದು ಹಬ್ಬವಾಗಿರಬೇಕು. ಎಷ್ಟೋ ಮಕ್ಕಳು ಸೂರಿಲ್ಲದೆ, ಅನ್ನವಿಲ್ಲದೆ, ವಿದ್ಯೆ ಇಲ್ಲದೆ ಭಿಕ್ಷಾಟನೆ ಮಾಡಿ, ಕ್ರೂರವಾಗಿ ದುಡಿಸಿಕೊಳ್ಳುವವರ ಕೈ ಕೆಳಗೆ ದುಡಿದು ಕಠೋರವಾದಂತಹ ಜೀವನ ಸಾಗಿಸುತ್ತಿದ್ದಾರೆ. ಇವರಿಗೂ ಮಕ್ಕಳ ದಿನಾಚರಣೆ ಹಬ್ಬವಾಗಬೇಕಲ್ಲವೇ? ಇವರು ಮಕ್ಕಳಲ್ಲವೇ? ಇಂತಹ ಎಷ್ಟೋ ಮಕ್ಕಳು ಇರುವಾಗ, ಮಕ್ಕಳ ದಿನಾಚರಣೆಯು ಒಂದು ಹಬ್ಬವಾಗಿ ಹೇಗೆ ಆಚರಿಸಲು ಸಾಧ್ಯ?
ಚಡ್ಡಿ ಹಾಕಿಕೊಂಡು ಆಡುವ ವಯಸ್ಸಲ್ಲಿ ಮಕ್ಕಳು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಯಾವ ಅಡ್ಡಿ-ಆತಂಕವಿಲ್ಲದೆ ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಾರೆ. ಮಕ್ಕಳು ವೈಟ್ನರ್(whitener) ಒಂದು ಬಟ್ಟೆಯ ಮೇಲೆ ಹಾಕಿ, ಅದರ ವಾಸನೆಯನ್ನು ಎಳೆದುಕೊಳ್ಳುತ್ತಾರೆ. ಇದರ ಬಗ್ಗೆ ಪತ್ರಿಕೆಯಲ್ಲಿ ಒಂದು ಲೇಖನ ಓದಿದ್ದೆ. ಆದರೆ ಮೆಜೆಸ್ಟಿಕ್ ರಸ್ತೆಗಳಲ್ಲಿ ಓಡಾಡುತ್ತಿರುವಾಗ ಇಂತಹ ಎಷ್ಟೊ ಮಕ್ಕಳನ್ನು ಕಣ್ಣಾರೆ ರಸ್ತೆಯ ಬದಿಗಳಲ್ಲಿ ಕಂಡೆ. ಒಂದು ಬಾಟಲು ವೈಟ್ನರ್ ಮುಂದೆ ಇಟ್ಟು, ಒಂದು ಬಟ್ಟೆಗೆ ಅದನ್ನು ಲೇಪಿಸಿ ಅದರ ವಾಸನೆ ಎಳೆಯುತ್ತಿದ್ದರು ಯಾವುದೇ ಭಯವಿಲ್ಲದೆ ಸಾರ್ವಜನಿಕವಾಗಿ. ಅದು  ನಶೆಯಂತೆ. ಒಂದು ರೀತಿ ಮತ್ತು ತರಿಸುತ್ತದೆ.. ಅದು ಕಮ್ಮಿ ಬೆಲೆಯಲ್ಲಿ ಸಿಗುವುದರಿಂದ ಬಡ ಮಕ್ಕಳು, ದೊಡ್ಡವರು ಸಹ ಇಂತಹ ದುಶ್ಚಟದಲ್ಲಿ ಬೀಳುತ್ತಿದ್ದಾರೆ!
ಸಣ್ಣ ವಯಸ್ಸಿಗೆ ಮೊಬೈಲ್ ಗಳ ಬಳಕೆ ಹೆಚ್ಚುತ್ತಿದೆ. ಇಂದು ಬೆಳಗ್ಗೆ ಒಬ್ಬ ಶಾಲಾ ಹುಡುಗ ನಮ್ಮ ಮನೆಯ ಮುಂದೆ ಸಾಗುತ್ತಿದ್ದ. ನೋಡಿದರೆ ಕೇವಲ ಐದೋ-ಆರೋ ತರಗತಿಯಲ್ಲಿ ಓದುತ್ತಿರುವನಂತೆ ಕಾಣುತ್ತಿದ್ದ. ಶಾಲಾ ವಸ್ತ್ರ ತೊಟ್ಟಿದ್ದ, ಬ್ಯಾಗ್ ಸಹ ಇತ್ತು. ಇಂದು ಮಕ್ಕಳ ದಿನಾಚರಣೆಯಾದ್ದರಿಂದ ಅವನು ಶಾಲೆಯಲ್ಲಿ ಜರಗುವ ಮಕ್ಕಳ ದಿನಾಚರಣೆಯ ಕಾರ್ಯಕ್ರಮಕ್ಕೆ ಹೊರಟಿಹನೆಂದು ಅಂದಾಜಿಸಿದೆ. ಆದರೆ ಅವನ ಕೈಯಲ್ಲಿ ಮೊಬೈಲ್ ಇತ್ತು, ಅದರಲ್ಲಿ ಮಾತನಾಡುತ್ತ ಹೋಗುತ್ತಿದ್ದ. ಆ ವಯಸ್ಸಲ್ಲಿ ಅವನಿಗೆ ಅದು ಬೇಕಾಗಿತ್ತೆ? ಅವನೊಬ್ಬನೆ ಅಲ್ಲ, ದಿನವೂ ಸಾಕಷ್ಟು ಶಾಲಾಮಕ್ಕಳು ಮೊಬೈಲ್ ಬಳಸುವುದನ್ನು ಕಾಣುತ್ತಲೆ ಇರುತ್ತೇನೆ. ಅವರು ತಂದೆ-ತಾಯಿಗೆ ತಿಳಿಯದಂತೆ ಉಪಯೋಗಿಸುತ್ತಾರೊ ಅಥವ  ತಂದೆ-ತಾಯಿಗಳೆ ಅದನ್ನು ಕೊಡಿಸಿರುತ್ತಾರೊ ನನಗೆ ತಿಳಿಯದು. ಆದರೂ ಆ ವಯಸ್ಸಿಗೆ ಮೊಬೈಲ್ ಬಳಕೆ ಮಾಡುವುದರಿಂದ ಜೀವನದಲ್ಲಿ ತಪ್ಪು ದಾರಿ ಹಿಡಿಯುವುದು ಮಾತ್ರ ಹೆಚ್ಚು ಪ್ರಮಾಣದಲ್ಲಿ ನಿಶ್ಚಿತ.
ಮಕ್ಕಳು ಮುಗ್ಧರು, ಏನು ಅರಿಯದವರು ಎನ್ನುವ ಅಂಶ ಈ ಕಾಲದಲ್ಲಿ ಮೂರು ಅಥವ ನಾಲ್ಕನೆ ತರಗತಿಯವರೆಗೆ ಸೀಮಿತವಾಗಿದೆ. ನಾನು ಕಾಲೇಜಿಗೆ ಬಸ್ಸಲ್ಲಿ ಹೋಗುವ ವೇಳೆಯಲ್ಲಿ, ಶಾಲಾ ಆವರಣಗಳಲ್ಲಿ ಸಂಚರಿಸುವ ಸಮಯದಲ್ಲಿ, ರಸ್ತೆಯಲ್ಲಿ ಸಾಗುತ್ತಿರುವಾಗ ಗಮನಿಸುತ್ತಿರುತ್ತೇನೆ. ಬಹಳಷ್ಟು ಸಣ್ಣ ವಯಸ್ಸಿನ ಹುಡುಗರ ಬಾಯಲ್ಲಿ ಕೆಟ್ಟ ಶಬ್ಧಗಳು ಲೀಲಾಜಾಲವಾಗಿ ಹರಿದಾಡುತ್ತಿರುತ್ತದೆ. ಅಂತಹ ಪದಗಳು ಇಂದಿನ ಬಹಳಷ್ಟು ಮಕ್ಕಳಿಗೆ, ಅವರು ವ್ಯವಹರಿಸುವ ಭಾಷೆಯಲ್ಲಿ ಸೇರಿಹೋಗಿವೆ. ಮಕ್ಕಳು ಆ ಸಣ್ಣ ವಯಸ್ಸಿಗೆ ಅಂತಹ ಶಬ್ಧಗಳನ್ನು ಯಾವ ಹೆದರಿಕೆ ಇಲ್ಲದೆ ಉಪಯೋಗಿಸುತ್ತಿದ್ದರೆ, ಬೆಳೆಯುತ್ತಾ ಹೋದಂತೆ ಅವೆಲ್ಲವೂ ಇನ್ನಷ್ಟು ಬೆಳೆದು, ಕಡೆಗೆ ಅವುಗಳನ್ನು ತಮ್ಮ ಜೀವನದ ಪದಕೋಶದಲ್ಲಿ ಅಚ್ಚಾಗಿ ಉಳಿಸಿಕೊಳ್ಳುತ್ತಾರೆ. ಆ ಮಕ್ಕಳು ಅಂತಹ ಅವಾಚ್ಯ ನುಡಿಗಳನ್ನು ಸಾರ್ವಜನಿಕವಾಗಿ ನಿರಾತಂಕವಾಗಿ ಉಪಯೋಗಿಸುವ ವೇಳೆಯಲ್ಲಿ ಅವರ ತಂದೆ-ತಾಯಂದಿರೆ ಕೇಳಿಸಿಕೊಂಡರೆ, ಅವರ ಬಂಧುಗಳ ಕಿವಿಗೆ ಬಿದ್ದರೆ,  ತಂದೆ-ತಾಯಂದಿರ ಆಪ್ತರಿಗೆ ಕೇಳಿಸಿದರೆ ಎಷ್ಟು ಅವಮಾನವಲ್ಲವೇ? ಕಡೆಗೆ ಅದರಿಂದ ತೆಗಳಿಕೆಗೆ ಗುರಿಯಾಗುವುದು ತಂದೆ-ತಾಯಂದಿರು ಹಾಗೂ ಗುರುಗಳು. ಮಕ್ಕಳು ಹಿಡಿದ ತಪ್ಪು ದಾರಿಯಿಂದ, ಕೆಟ್ಟ ಸಹವಾಸದಿಂದ ಅವರ ತಂದೆ-ತಾಯಿಯರಿಗೆ ದೊಡ್ಡ ಉಡುಗೊರೆಯೇ ದೊರಕುತ್ತದೆ. ಹಾಗಾಗಿ ತಂದೆ-ತಾಯಂದಿರು ಮಕ್ಕಳಿಗೆ ಸಣ್ಣ ವಯಸ್ಸಿನಿಂದ ಒಳ್ಳೆಯ ಗುಣವನ್ನು ಕಲಿಸುತ್ತ ಬರಬೇಕು. ಹಾದಿ ತಪ್ಪದಂತೆ ಎಚ್ಚರವಹಿಸಬೇಕು. ಗುಣವಂತರಾಗಿ ಬೆಳೆದ ಮಕ್ಕಳು ಸಹ ತಪ್ಪು ದಾರಿ ಹಿಡಿಯುತ್ತಿರುವುದು ಅಧಿಕವಾಗಿದೆ. ಒಳ್ಳೆಯ ಹಾದಿಗಿಂತ, ಕೆಟ್ಟ ಹಾದಿಗಳು ಹೆಚ್ಚು ಆಕರ್ಶಿಸುತ್ತದೆ. ಆ ಹಾದಿಗೆ ಮೋಹಿತರಾಗಿ ಮಕ್ಕಳು ತಮ್ಮ ನಡಿಗೆ ಶುರು ಮಾಡುತ್ತಾರೆ.
ನನಗೆ ತಿಳಿದವನೆ ಒಬ್ಬ ಹುಡುಗನನ್ನು ಕೇಳಿದೆ, " ಯಾಕಪ್ಪ ಸಣ್ಣ ವಯಸ್ಸಲ್ಲಿ ಕೆಟ್ಟ ಪದಗಳನ್ನು ಬಳಸುತ್ತೀಯ? ನಿನ್ನ ತಂದೆ-ತಾಯಿಯೊಡನೆ ಅಥವ ಹಿರಿಯರೊಡನೆ ಮಾತನಾಡುವಾಗ ನಿನಗೆ ತಿಳಿಯದೆ ಆ ನುಡಿಗಳು ನಿನ್ನ ಮಾತಿನಲ್ಲಿ ಸೇರುತ್ತದೆ. ಅಂತಹ ಪದಗಳ ಬಳಕೆ ಕಡಿಮೆ ಮಾಡು ".
ಅದಕ್ಕೆ ಅವನು ಕೊಟ್ಟ ಉತ್ತರ ಈ ರೀತಿ ಇತ್ತು, " ಇದು ಕೆಟ್ಟ ಪದಗಳು ಎಂದು ನನಗೇನು ಅನಿಸುವುದಿಲ್ಲಾ. ಈಗ ಗೆಳೆಯರೆಲ್ಲರೂ ಹಾಗೆ ಮಾತನಾಡುವುದು, ನಾನು ಸಹ ಹಾಗೆಯೇ ಮಾತನಾಡಬೇಕು. ಇಲ್ಲವೆಂದರೆ ನನಗೆ ಏನು ತಿಳಿಯದವನೆಂದು ಹೀಯಾಳಿಸುತ್ತಾರೆ. ಅದು ಅಭ್ಯಾಸವಾಗಿ ಹೋಗಿದೆ. ನಾನು ಮಾತನಾಡುವುದೇ ಹಾಗೆ. ನಿಮಗೇನು ಕಷ್ಟ? ". ಇಂತಹ ಉತ್ತರಕ್ಕೆ ನಾನೇನು ಉತ್ತರ ನೀಡಲಿ? ಆದರೂ ಎಷ್ಟೋ ಹೇಳಿ ಅರ್ಥೈಸಲು ಪ್ರಯತ್ನಿಸಿದೆ. ಆದರೆ ಅವನು ಅರಿಯಲಿಲ್ಲ. ನನ್ನ ಮುಂದೆ ಹೂಂ ಎಂದರು, ಗೆಳೆಯರು ಸಿಕ್ಕಾಗ ಮಾಮೂಲಿ. ಇನ್ನೊಮ್ಮೆ ನನಗೆ ಸಿಕ್ಕಾಗಲು ಹಿಂದೆ ಹೇಳಿದ್ದು ಮರೆತಿರುತ್ತದೆ.
ಈ ರೀತಿ ಮಕ್ಕಳು ಹಾಳಾಗುತ್ತಿರುವಾಗ, ಸಂಸ್ಕಾರವನ್ನು ಕಳೆದುಕೊಳ್ಳುತ್ತಿರುವಾಗ ಮಕ್ಕಳ ದಿನಾಚರಣೆಯ ಬೆಲೆಯು ಕಳೆದುಕೊಳ್ಳುತ್ತಿದೆ. ದೊಡ್ಡವರು ಮಕ್ಕಳಿಗೆ ಒಳ್ಳೆಯ ರೀತಿಯಲ್ಲಿ ಬುದ್ಧಿ ಹೇಳಿ, ಕೆಟ್ಟ ದಾರಿ ಹಿಡಿದರೆ ಮುಂದಾಗುವ ಅವಾಂತರ, ದುಶ್ಪರಿಣಾಮವನ್ನು ತಿಳಿಸಬೇಕು, ಒಳ್ಳೆಯತನದಲ್ಲಿ ಬೆಳೆಸಬೇಕು. ಮಕ್ಕಳು ಕೆಟ್ಟದಾರಿ ಹಿಡಿದಾಗಲು ತಾಳ್ಮೆ ಕೆಳೆದುಕೊಳ್ಳದೆ, ಯಾವ ರೀತಿಯಲ್ಲಿ ಮಕ್ಕಳನ್ನು ಅದರಿಂದ ಆಚೆತರಬೇಕು ಎನ್ನುವುದನ್ನು ಯೋಚಿಸಿ, ಅದನ್ನು ಕಾರ್ಯಗತಗೊಳಿಸಬೇಕು. ಒಂದು ಮಗುವು ತನ್ನ ಜೀವನದಲ್ಲಿ ಒಳ್ಳೆಯ ಸಂಸ್ಕಾರ, ನಡುವಳಿಕೆ ರೂಢಿಸಿಕೊಂಡರೆ, ಒಳ್ಳೆಯ ತನದಲ್ಲಿ ಬೆಳೆದರೆ, ಆಗ ಮಕ್ಕಳ ದಿನಾಚರಣೆಯು ನಿಜವಾದ ಹಬ್ಬವಾಗುತ್ತದೆ.

Saturday, November 12, 2011

ಬಡವನೆಂಬ ಭೇದವೇಕೆ?



ಕೆರೆಯ ನೀರನು ಕೆರೆಗೆ ಚೆಲ್ಲಿ
ವರವ ಪಡೆದವನಂತೆ ಕಾಣಿರೋ!
ಈ ಸಾಲು ಈ ಕಾಲಕ್ಕೆ ಹೇಗಿದೆಯೆಂದರೆ
ಶ್ರೀಮಂತರು ಹಣವನ್ನು ಶ್ರೀಮಂತರಿಗೆ ಕೊಟ್ಟು
ತಾವು ದಾನಿಯಂತೆ ತೋರಿದ ಹಾಗೆ


ಸಿರಿವಂತರ ಸಂಪತ್ತು ಪರ್ವತಗಳ ದಾಟಿ ಮುನ್ನುಗ್ಗುತಿದೆ
ಬಡವರ ಕಷ್ಟ-ನೋವುಗಳು ಸಮುದ್ರದ ಆಳಕ್ಕೆ ಇಳಿಯುತಿದೆ
ಇದು ಸಾಲದೆಂದು ಬಡವರ ಮೇಲೆ ಭ್ರಷ್ಟತನ
ಇದರಿಂದ ಬಡವರಿಗೆ ಬಡತನದ ಆನರ್ತನ
ಹಣವಂತರಿಗೆ ಮತ್ತಷ್ಟು ದುಡ್ಡು ಶೇಕರಣೆಯ ಚಿಂತೆ
ಬಡವರಿಗೆ ಒಂದೊತ್ತು ಊಟವಿಲ್ಲದೆ ಸೇರುವರು ಚಿತೆ
ಸಂಪತ್ತು ಎಷ್ಟಿರಲಿ, ಹಣದಲ್ಲೆ ಮನೆ ಇರಲಿ
ಕಡೆಗೆ ದೇಹ ಸೇರೋದು ಮಣ್ಣಿಗೆ ಅಲ್ಲವೇ?

ಶ್ರೀಮಂತ-ಬಡವ ಎಂಬ ಬೇಧ-ಭಾವ ಏತಕೆ ಹೇಳಿ?
ಬದುಕುವ ಈ ಮೂರು ದಿನದಿ ಹಂಚಿಕೊಂಡು ಬಾಳಿ
ಆತ ಬಡವನೆಂದು ದಬ್ಬಾಳಿಕೆ ಮಾಡುವ ಬದಲು
ಅವನಿಗೆ ನೆಲೆ ನೀಡಿ, ಬಿಡಬಹುದಲ್ಲವೇ ಬದುಕಲು.

ಅಳೆಯಲು ಹೋದರೆ ಸಿರಿವಂತರ ಮನುಷ್ಯತ್ವವ-
ಮುಗ್ಗರಿಸಿ ಬೀಳುವೆವು.
ಅರಿತರೆ ಸಾಕು ದೀನರ ಪ್ರೀತಿ ವಿಶ್ವಾಸವ,
ಬಾಳಲ್ಲಿ ಸಾಕಷ್ಟು ಕಲಿವೆವು
ಹಣದ ದೌಲತ್ತಲಿ ಬಡವರ ತುಳಿಯದಿರಿ
ದೀನರು ಸಹ ಮನುಜರು ಎಂಬುದ ಮರೆಯದಿರಿ
ಬಡತನ ನಿರ್ಮೂಲನೆಯೇ ದೇಶದ ಏಳಿಗೆ
ಇದನರಿತು ನಡೆಯಬೇಕು ಯುವ ಪೀಳಿಗೆ


Monday, November 7, 2011

ಪ್ರೀತಿಯ ತೊಟ್ಟು ದ್ವೇಷವ ಅಟ್ಟು


                                                                        ಮಾತಿಗೆ ಮುನ್ನ ಮೂದಲಿಕೆ ಏಕೆ?
ಮುಖದಲಿ ಕೊಂಚ ನಗುವ ಬೀರು
ಎಲ್ಲರ ಮೇಲೂ ಪ್ರೀತಿಯ ತೋರು
    ಮೌನವ ಮುರಿಯುತ ಮಾತಿನ ಚೂರಿ,
ಏತಕೆ ಹಾಕುವೆ ಕೋಪವ ತೋರಿ?

ಬಿಗುವಿನ ಮನವು ಏತಕೆ ನಿನಗೆ?
ದಿನವು ಮಾಡುವೆ ಮರೆಯದೆ ಜಳಕ
ತೊಳೆಯೊ ಮೊದಲು ಮನದ ಕೊಳಕ
ಮನದಲಿ ಇರುವ ಕೋಪವ ತೋರುತ
ನೋವಿಸುವೆ ಏಕೆ ದ್ವೇಷವ ಕಾರುತ?

ಪ್ರೀತಿ, ಮಮತೆ ಇಲ್ಲವೇ ನಿನ್ನಲಿ?
                                                   ಏತಕೆ ನಿನಗೆ ಹೀಯಾಳಿಸುವ ಅಭ್ಯಾಸ?
                                                   ಪ್ರೀತಿಯ ತೋರಲು ಕೊಡಬೇಕೆ ಕಾಸು?
                                                  ಹಗೆಯನು ನೀ ಬಿಡು, ಸ್ನೇಹವ ಮಾಡು
                                                    ಪ್ರೀತಿ-ಸಂತಸದಿ ಕುಣಿಯುತ ಹಾಡು.

ಯುವ ಪೀಳಿಗೆಗೆ ಬೇಕು ಜ್ಞಾನದ ಅರಿವು


ಮಹಾತ್ಮ ಗಾ೦ಧೀಜಿಯವರು ಹೇಳುತ್ತಾರೆ, " ಡೊಡ್ದ ಸಮಸ್ಯೆ ಏನೆ೦ದರೆ? ಜನರಿಗೆ ವಿದ್ಯಾಭ್ಯಾಸದ(ಎಜ್ಯುಕೇಶನ್) ನಿಜವಾದ ಅರ್ಥ ಏನೆ೦ದು ತಿಳಿದಿಲ್ಲ. ನಾವು ವಿದ್ಯೆಯನ್ನು ಕೇವಲ ಭೂಮಿ ಅಥವಾ ವ್ಯಾಪಾರದ೦ತೆ ಕಾಣುತ್ತಿದ್ದೇವೆ, ಇದು ಕೇವಲ ವಿದ್ಯಾರ್ಥಿಗೆ ಹಣ ಗಳಿಕೆಗೆ ಉಪಯೋಗವಾಗಬಹುದು. ಆದರೆ ಒಬ್ಬ ವಿದ್ಯಾರ್ಥಿಯ ನಡತೆ ಅಥವ ಗುಣದ ಬೆಳವಣಿಗೆಯ ವಿದ್ಯಾಭ್ಯಾಸದ ಬಗ್ಗೆ ಯೋಚಿಸುವಿರಾ? " ಎ೦ದು ಪ್ರಶ್ನಿಸುತ್ತಾರೆ.
ಇ೦ತಹ ಪ್ರಶ್ನೆ ಗಾ೦ಧೀಜಿಯವರಿಗೆ ಅನೇಕ ವರ್ಷಗಳ ಹಿ೦ದೆಯೇ ಮೂಡಿತ್ತು, ಈಗ ಆ ಪ್ರಶ್ನೆಗೆ ಉತ್ತರ ನಕಾರಾತ್ಮಕವಾಗಿದೆ ಎನ್ನುವುದೇ ಕಳವಳದ ಸ೦ಗತಿ. ಈಗಿನ ಕಾಲದ ವಿದ್ಯಾರ್ಥಿಯಾದ ನಾನು, ಈಗಿನ ಯುವ ಪೀಳಿಗೆಯ ಯುವಕ, ನಾನು ಈ ಪ್ರಪ೦ಚವನ್ನು ನೋಡುತ್ತಲೇ ಬೆಳೆಯುತ್ತಿದ್ದೇನೆ. ಈಗಿನ ಕಾಲದ ಯುವಕ/ಯುವತಿಯರಿಗೆ ಓದುವುದೆ೦ದರೆ ಬಲು ಕಷ್ಟ,  ಕೆಲವರು ಪುಸ್ತಕ ಬದನೆಕಾಯಿಯ೦ತೆ  ಮೂರು ಹೊತ್ತು ತಮ್ಮ ಪರೀಕ್ಷೆಗೆ ಸ೦ಭ೦ದ ಪಟ್ಟ೦ತ ಪುಸ್ತಕವನ್ನು ಮಾತ್ರ ಓದುತ್ತಿರುತ್ತಾರೆ. ಇ೦ತವರಿಗೆ ರಾಷ್ಟ್ರದ ಪ್ರಧಾನಮ೦ತ್ರಿ ಯಾರು? ಅಥವ ಇತ್ತೀಚಿನ ಸಾಮಾನ್ಯ ವಿಷಯಗಳ ಬಗ್ಗೆ ಕೇಳಿದರೆ ತಿಳಿದಿರುವುದಿಲ್ಲ. ಈಗಿನ ಅನೇಕ ವಿದ್ಯಾರ್ಥಿಗಳಿಗೆ ಜ್ಞಾನ ಸ೦ಪಾದನೆಯ ಬಗ್ಗೆ ಆಸಕ್ತಿಯೇ ಇಲ್ಲ, ಕೇವಲ ಪರೀಕ್ಷೆಯಲ್ಲಿ ಅ೦ಕ ಸ೦ಪಾದನೆ, ನ೦ತರ ಹಣ ಸ೦ಪಾದನೆ, ಕೇವಲ ಇಷ್ಟರಲ್ಲೇ ಮುಳುಗಿ, ಒದ್ದಾಡಿ , ತೊಯ್ದು ಹೋಗಿರುತ್ತಾರೆ.
ಇದು ಹೇಗೆ೦ದರೆ ಕ್ರಿಕೆಟ್ ಕ್ರೀಡಾ೦ಗಣದಲ್ಲಿ ಬೌ೦ಡರಿ ಲೈನ ಇದ್ದ೦ತೆ, ಕೇವಲ ಪಠ್ಯ ಪುಸ್ತಕ ಓದುವ ವಿದ್ಯಾರ್ಥಿ ಆ ಬೌ೦ಡರಿ ದಾಟಿ ಹೊಡೆಯುವುದೇ ಇಲ್ಲ, ಕೇವಲ ಆ ರೇಖೆಯ ಒಳಗಡೆ ಅವನ ಯೋಚನೆ ಹಾಗೂ ಕೆಲಸ. ಆದರೆ ಒಬ್ಬ ವಿದ್ಯಾರ್ಥಿ ತನ್ನ ಪಾಠದೊ೦ದಿಗೆ, ಇತರೆ ಕಾರ್ಯಗಳಲ್ಲಿಯೂ ತೊಡಗಿ, ಅನೇಕ ತರಹದ ಪುಸ್ತಕದ ಬಾ೦ಧವ್ಯ ಹೊ೦ದಿದ್ದರೆ ಅವನ ಯೋಚನಾ ಲಹರಿ ಗಾಢವಾಗಿರುತ್ತದೆ ಹಾಗೂ ಅವನು ಪ್ರಪ೦ಚವನ್ನು ವಿಸ್ತಾರವಾಗಿ ನೋಡುತ್ತಾನೆ. ಅ೦ತಹವನಿಗೆ ಬೌ೦ಡರಿ ಒಳಗಡೆಯೂ ಅವಕಾಶ, ಬೌ೦ಡರಿ ಆಚೆಯೂ ಹೆಚ್ಚು ಅವಕಾಶ ಇರುತ್ತದೆ.



ಹೆಚ್ಚಿನ ವಿದ್ಯಾರ್ಥಿಗಳು ಗ್ರಂಥಾಲಯಗಳ ಉಪಯೋಗ ಪಡೆಯುವುದೇ ಇಲ್ಲ. ಕೇವಲ ತಿ೦ಗಳಲ್ಲಿ ಎರಡೊ-ಮೂರೋ ಪಠ್ಯ ಪುಸ್ತಕ ತೆಗೆದುಕೊಂಡರೆ ತಾವು ಗ್ರಂಥಾಲಯಕ್ಕೆ ಹೋಗುತ್ತೇವೆ ಎಂಬ ಹೆಮ್ಮೆ. ಆದರೆ ಅದೇ ಗ್ರಂಥಾಲಯದಲ್ಲಿ ಸಾವಿರಾರು ಅನೇಕ ತರಹದ ಪುಸ್ತಕಗಳು ಇವೆ ಎ೦ದು ಸಹ ತಿಳಿದಿದೆಯೋ ಇಲ್ಲವೋ ನಾ ಅರಿಯೇ! ಚಿಂತನೆಗಳ ಪುಸ್ತಕ, ಕೃತಿ, ಕಾದಂಬರಿ, ಕಾವ್ಯ, ಸಾಮಾನ್ಯ ಜ್ಞಾನ, ಇತಿಹಾಸ, ಭೂಗೋಳ, ಹೀಗೆ ಅನೇಕ ರೀತಿಯ ಸಾಹಿತ್ಯಿಕ ಪುಸ್ತಕಗಳು ಇದ್ದರೂ, ತಟಸ್ಥವಾಗಿ ಕೂತಲ್ಲಿಯೇ ಅನೇಕ ವರ್ಷಗಳು ಗ್ರಂಥಾಲಯಗಳಲ್ಲಿ ಕೂತಿರುತ್ತವೇ. ಕೇವಲ ಬೆರಳಣಿಕೆಯಷ್ಟು ವಿದ್ಯಾರ್ಥಿಗಳು ಆ ಪುಸ್ತಕಗಳ ತಟಸ್ಥತೆಗೆ ಭಂಗ ತರಿಸುತ್ತಾರೆ. ಹೀಗೆ ಯುವ ಜನತೆಯಲ್ಲಿ ಗ್ರಂಥಾಲಯ ಉಪಯೋಗದ ಬಗ್ಗೆ ಅರಿವಿಲ್ಲ, ಅರಿಯಲು ಮೊದಲು ಜ್ಞಾನ ಸಂಪಾದನೆಯ ಬಗ್ಗೆ ಆಸಕ್ತಿಯೇ ಇಲ್ಲ. ಕೇವಲ ತಮ್ಮ ಪಠ್ಯದಲ್ಲಿ ನಿಗದಿಯಾಗಿರುವುದನ್ನು ಓದಿ, ಹೆಚ್ಚು ಅಂಕ ಪಡೆದರೆ ತಾವೂ ಜ್ಞಾನವಂತರೂ ಎಂದು ಹೇಳಿಕೊಳ್ಳುವವರು ಅಪಾರ. ಆದರೆ ಅಂತವರಿಗೆ ಜೀವನದ ಮೌಲ್ಯ ಅರಿಯಲು ಸಾಧ್ಯವಿಲ್ಲ, ಜೀವನ ಅಲ್ಪತೆಯಾಗಿರುತ್ತದೆ. ಹಾಗಾಗಿ ಜ್ಞಾನದ ದಾಹ ಇರಬೇಕು, ಸಾಹಿತ್ಯದ ಆಸಕ್ತಿ ಬೆಳೆಸಿಕೊಳ್ಳಬೇಕು, ಗ್ರಂಥಾಲಯಗಳ ಉಪಯೋಗ ಅರಿಯಬೇಕು, ಇನ್ನೊಬ್ಬರಿಗೂ ಅರಿವಾಗಿಸಬೇಕು. ಆಗ ಜ್ಞಾನದ ಹೊಳೆ ಯುವ ಜನತೆಯಲ್ಲಿ ಹರಿಯುತ್ತದೆ, ತಮ್ಮ ಯೋಚನಾಶಕ್ತಿ ಪರ್ವತ ಮಟ್ಟಕ್ಕೆ ಏರುತ್ತದೆ, ನದಿಯಂತೆ ಹರಿದು, ಕಡೆಗೆ ಸರೋವರದಷ್ಟಾದರು ನಮ್ಮಲಿರುವ ಜ್ಞಾನ ನಮ್ಮ ಪರಿಸರಕ್ಕೆ ಉಪಯೋಗವಾಗುತ್ತದೆ. ಇದಕ್ಕೆಲ್ಲ ಮೂಲ ಮಂತ್ರ ಹೆಚ್ಚು ಪುಸ್ತಕ ಓದುವುದು, ಗ್ರಂಥಾಲಯಗಳ ಉಪಯೋಗ ಪಡೆಯುವುದು, ಜ್ಞಾನವಂತರ ಜೊತೆ ವಿಷಯ ಸಮಾಲೋಚನೆ ಮಾಡುವುದು. ಇಂದಿನ ಯುವ ಪೀಳಿಗೆ ಈ ಎಲ್ಲವನ್ನು ಅರಿತು ಬೆಳೆದರೆ ತಮ್ಮ ಜ್ಞಾನ ಸಂಪಾದನೆಯ ಜೊತೆಗೆ, ದೇಶದ ಅಭಿವೃದ್ಧಿ, ರಾಷ್ಟ್ರದ ಬೆಳವಣಿಗೆಗೆ ಸಹಕಾರವಾಗುತ್ತದೆ.