Monday, April 28, 2025

ಪರಿಮಿತಿಯ ಭಾವನೆ


ಮಿಡಿಯುವ ಮನಸ್ಸಿಗೆ
ತನ್ನದೆಯಾದ ವಿಸ್ತಾರ!
ಹರಿಯುವ ನದಿಗೆ
ಸಮುದ್ರದಂತೆ,
ರೆಕ್ಕೆ ಬಿಚ್ಚಿ ಹಾರುವ
ಹಕ್ಕಿಗೂ ಇದೆಯಲ್ಲ..

ಪರಿಮಿತಿಯ ಭಾವನೆ
ವಿಸ್ತಾರವಾಗಿ ಅಲ್ಲೇ ಸುತ್ತುತ್ತಾ 
ಆದದ್ದು ದೊಡ್ಡ ಆಕಾರ!
ಸಣ್ಣ ಕಿಡಿ ಸಾಕು
ಬಾನುದ್ದ ಬೆಳೆದ ಭಾವಕ್ಕೂ
ಬೂದಿಯ ರೂಪವಾಗಲು..

ಮರುಗಬೇಕು ಆತ್ಮಕ್ಕೆ ಅಂಟಿದ ನಂಟಿಗೆ
ಬೆರೆಯಬೇಕು ಭಾವಕ್ಕೆ ಬೆರೆತ ಬಂಧಕ್ಕೆ
ಅನುಭವದ ಬೆನ್ನೇರಿ ಅನುಭಾವ ಮರೆತರೆ
ಸಂಬಂಧಗಳ ಸುಮವೆ ಘಮಿಸದು..

Tuesday, March 18, 2025

ಭರವಸೆಯ ಬೆಳಕು

ಸುಡು ಬಿಸಿಲು
ಧಗ ಧಗ ಉರಿಯುವ ಧರೆ
ತಾಪದೆಲರು
ಉದುರಿರುವ ಎಲೆ ರಾಶಿ

ಮುಳುಗದೆ ಊರನ್ನೇ ಸುಡುವನೋ
ಎಂಬಂತ ಬೇಸಿಗೆಯ ದಿನ
ಸಂಜೆಯ ಚಂದಿರನ ಸ್ವಾಗತಕ್ಕೆ
ಕೆಂಪೆರೆದು ಮುಳಗಲೇ ಬೇಕು

ಕಾದ ರಸ್ತೆಗಳ ಮೇಲೆ
ಸಂಜೆಯ ಆಫೀಸ್ ಮುಗಿಸಿ
ಹೊರಟ ಆತನಿಗೂ
ಗೂಡ ಸೇರಲು ಹೊರಟ 
ಆ ಹಕ್ಕಿಗೂ ಏನೋ ನಂಟು

ಬೀದಿ ದೀಪಗಳು ಹತ್ತುವ ಹೊತ್ತಿಗೆ
ಹಕ್ಕಿಗೆ ಸಾಕಾದ ಬೆಳಕು
ಸೈಕಲ್ ತುಳಿಯಲು ಬೆಳಕೆ ಬೇಕೆನ್ನುವ ಆತ
ಗೂಡ ಸೇರಿ ಮಲಗಿದ ಮೇಲೆ
ಕತ್ತಲೆಯೇ, ನಾಳೆಯ ಭರವಸೆಯ ಬೆಳಕಷ್ಟೇ.. 

-ಅ. ರಾ. ತೇ

Thursday, January 2, 2025

ನೂರು ಹಾದಿಯ ಬದುಕು

ಬದುಕೊಂದೆ ಆಗಿರಲು
ಜನುಮಕ್ಕೆ ನೀ ಇರಲು
ಇರುವಷ್ಟು ನಗುವಿರಲಿ
ಅಳುವೆಲ್ಲ ಬದಿಗಿರಲಿ..

ಹೊತ್ತು ಸಲುಹಿದ ಕನಸು
ಒಮ್ಮೊಮ್ಮೆ ಆಗದು ನನಸು 
ಹಾಗೆಂದು ಆ ಕನಸೇ ಅಲ್ಲ ಕೊನೆ
ಒಂದೊಳ್ಳೆ ಬದುಕಿಗೆ ಆಗುವುದು ಸೋನೆ..

ನೂರು ಹಾದಿಯ ಬದುಕು
ಸೊಗಸಾಗೆ ಇರದಲ್ಲ!
ಒಂದೊಂದು ದಾರಿಗೆ ನೂರೊಂದು ಮುಳ್ಳು
ಕೆಲವೊಂದು ಹಾದಿಯು ಹೂವಿನ ಹೊರಳು..
ಚುಚ್ಚಿದ ಮುಳ್ಳು ಮರೆಯಬೇಕು ಅಲ್ಲೆ
ಅಳ್ಳುತ್ತ ನಿಂತರೆ ಮುಂದೆಲ್ಲ ಕಲ್ಲೆ!!

ಹಲವು ಸರಿಗಳ ಮಧ್ಯೆ ಇರಲಾರದೆ ತಪ್ಪು?
ಒಳ್ಳೆಯ ಭವಿಷ್ಯಕ್ಕೆಂದರೆ ಅರ್ಥೈಸಿ ಒಪ್ಪು!
ಆಗಬಹುದು ಕಷ್ಟ ಒಪ್ಪಲು ಆ ಸತ್ಯ
ಹಾಗೆಂದು ಬಿಕ್ಕಲಾದೀತೇ ಕೂರುತ್ತ ನಿತ್ಯ? 

ಬೀಳ್ಕೊಡಬೇಕು ಕೆಲವನ್ನು ಹಾದಿಯ ಮಧ್ಯೆಯೇ
ಮುಂದುವರೆಯಲು, ಮತ್ತೆ ನಡೆಯಲು!
ಬಾಳಿನ ಹಿತಕ್ಕಾಗಿ ಮರೆಯಬೇಕು ಈ ಪ್ರವಾಹ 
ಆಗಲೇ ಬೆಳಗುವುದು ಮನೆ, ಮನಗಳು ಪುನಹ..

ಬೇವು ಬೆಲ್ಲದಂತೆ ಅಷ್ಟೇ ಈ ಸಮಯ
ಒಂದಷ್ಟು ಕಹಿ, ಅಗೆಯೋಣ ಒಟ್ಟಾಗಿ
ಇದ್ದೆ ಇರುವುದು ಸಿಹಿ ಮುಂದೆ ಗುಟ್ಟಾಗಿ!! 
ಕಾಡದಿರಲಿ ಆ ನೆನಪು ಕಹಿಯಾಗಿಯೇ ಎಂದೆಂದೂ
ಸಿಹಿಯ ಬದುಕಿಗೆ ಆಗಬಾರದಲ್ಲವೇ ಅದು
ಮುಳ್ಳಾಗಿ ಇನ್ನೆಂದೂ..!! 

ಮತ್ತಷ್ಟು ಪ್ರೀತಿ, ಮಗದಷ್ಟು ರೀತಿ
ಕೊಡುವೆನು ಎಂದೆಂದೂ ನಾ ಸಂಪ್ರೀತಿ..