Wednesday, July 18, 2018

ಬಂದಿತು ನೋಡೊ ಪಾತರಗಿತ್ತಿ










ಬಂದಿತು ನೋಡೊ ಪಾತರಗಿತ್ತಿ
ಹಾಡುತ ಕುಣಿಯುತ ಊರನು ಸುತ್ತಿ
ಎಷ್ಟೇ ಅಲೆದರು ಬಣ್ಣವು ಮಾಸದೆ
ಬಿಸಿಲಿನ ಬೇಗೆಗೆ ಸ್ವಲ್ಪವು ದಣಿಯದೆ
ಬಂದಿತು ನೋಡೊ ಪಾತರಗಿತ್ತಿ


ಕಣ್ಣಿಗೆ ಕಂಡರು, ಕೈಯಿಗೆ ಸಿಗದೆ
ಒಂದು ಕ್ಷಣವು ಎಲ್ಲಿಯು ನಿಲ್ಲದೆ
ಹೂವಿಂದ ಹೂವಿಗೆ ಹಾರುತ
ಕುಸುಮಗಳ ಮಕರಂದ ಹೀರುತ
ಹಾರಿತು ನೋಡೊ ಪಾತರಗಿತ್ತಿ


ದೇಹವು ಚಿಕ್ಕದು ಬಣ್ಣದ ಚಿಟ್ಟೆಗೆ
ಅದರ ರಮ್ಯತೆ ನಿಲುಕದು ಮಾತಿಗೆ
ಬದುಕುವ ಅವಧಿ ಅಲ್ಪವೆಯಾದರು
ಜೀವನ ರೀತಿ ಸುಟಾತ್ಮಕವು..


- ಅ. ರಾ. ತೇ
(ಸುಮಾರು ಆರು-ಏಳು ವರುಷಗಳ ಹಿಂದೆ ಬರೆದ್ದದ್ದು)

Thursday, May 24, 2018

ನಿನಗೆ ನಾನೇ ಒಂದು ಪದ್ಯವಾದೆ


ಕಂಡೆನೊಂದು ಸಿಂಚನ
ಹೊಸ ರೀತಿಯಾಗಿ
ನನ್ನ ಕರದಿ ಬಂಧಿಯಾದ
ನಿನ್ನ ಮೊಗದ
ಅರಳಿದ ತುಟಿಗಳಲ್ಲಿ.. 
ರಮಿಸುವೆ ಅನುಕ್ಷಣ 
ನಿನ್ನ ನಗುವೆಲ್ಲವ ಆರಿಸಿ
ಹೃದಯದ ಬುತ್ತಿ ತುಂಬಿಕೊಳ್ಳುವಾಗ

ನಿನ್ನ ಚೆಲುವ ಕಾಣುವಾಗ
ಆಗಸದೆತ್ತರಕೆ ಚಿಮ್ಮುವೆ ನಾ 
ಕಾಮನಬಿಲ್ಲ ರಂಗಲಿ 
ಹೊಸೆದ ಸಾಲಿ 
ಉಟ್ಟ ನೀನು
ಮೋಹಿತನಾದ ನಾನು..!!
ಬಣ್ಣಿಸಲಿ ಇನ್ನು ಹೇಗೆ 
ಮೂಕವಿಸ್ಮಿತನಾಗಿಸಿ ನನ್ನ 
ನಾಚುತ್ತಾ ನೀ ಕೂತಾಗ 

ಪ್ರತಿ ಪುಸ್ತಕದ ಹಾಳೆಯ ನಡುವೆ
ನಿನ್ನ ಮೇಲೆಯೆ ಕವಿತೆಗಳು 
ಶಾಹಿ ಖಾಲಿ ಆಯಿತೆ ಹೊರತು
ನನ್ನ ಪ್ರೇಮವಲ್ಲ!! 
ನಿನಗೆ ನಾನೇ ಒಂದು ಪದ್ಯವಾದೆ - 
ಚೆಲುವ ಕನ್ನಿಕೆ.. 

- ಅ. ರಾ. ತೇಜಸ್ 

Friday, May 4, 2018

ಪ್ರತಿ ಹೆಜ್ಜೆಯ ಸಂಭ್ರಮ

ಚೆಲ್ಲ ಪಿಲ್ಲಿಯ ಬದುಕು 
ಹುಟ್ಟು ಒಂದೆಡೆ 
ಸಾವು ಮತ್ತೊಂದೆಡೆ 
ಜೀವಿಸುವ ಪ್ರತಿ ಕ್ಷಣವು
ಅನಿಶ್ಚಿತ, ಅನಿರೀಕ್ಷಿತ...

ದೂರದ ಎರಡು ಮನಸು 
ಪ್ರೇಮಾಂಕುರದಿ ಬಂಧಿಯಾಗುವುದು
ಮತ್ತೊಂದು ಸೊಗಸು 
ಕನಸುಗಳು ಭಿನ್ನ 
ಆಸೆಗಳು ವಿಭಿನ್ನ 
ಆದರೂ ಕೂಡುವುದು  ಒಂದಾಗಿ
ಕುಟುಂಬವೆಂಬ ಆಸರೆಯ ಹೆಸರಾಗಿ.. 

ಎಲ್ಲರದು ಒಂಟಿ ಪಯಣ 
ಆದರೂ ಜೊತೆಯಲ್ಲೇ 
ನಾನು ನನ್ನದು, ತಾನು ತನ್ನದು.
ಎಲ್ಲವೂ ಮಿಶ್ರಣ 
ಬೆಸದ ಮನಗಳ ಪ್ರತಿ ಹೆಜ್ಜೆಯ ಸಂಭ್ರಮ..

- ಅ.ರಾ.ತೇಜಸ್
(ಪುರವಣಿಯ ಚಿತ್ರ ಕಾವ್ಯಕ್ಕೆ ಬರೆದದ್ದು)

Friday, March 23, 2018

ನಿನ್ನ ಮುಂಗುರುಳು ಸರಿದು

ನಿನ್ನ ಮುಂಗುರುಳು ಸರಿದು
ನಿನ್ನ ಕಣ್ಣ ಮುತ್ತುವಾಗ
ನನ್ನ ಅಸೂಯೆ ದುಪ್ಪಟ್ಟು ಆಗುತ್ತದೆ
ಆ ತುಟಿಗಳ ನಡುವೆ
ಕಳ್ಳನಂತೆ ಸುಳಿವ ಆ ಕಿರುನಗೆ
ಬರೀ ನನ್ನವೇ ಆಗಿರುವಾಸೆ..

ನಿನ್ನ ಎದೆಬಡಿತಕೆ
ಸರಿಸಾಟಿಯಾದ ಸಂಗೀತ ಉಂಟೇ
ಶೃತಿ ಹಿಡಿದು ಬಡಿವ ಅದು
ನನ್ನ ಹೊತ್ತುಕೊಂಡೆ ಕುಣಿವುದು!!

ನಾ ಕಳುಹಿಸುತ್ತಿರುವ ಅಂಚೆ
ನಿನಗೆ ತಲುಪುತ್ತಿದ್ದೆಯೇ ಸರಿಯಾಗಿ?
ನಿನ್ನ ನೆನೆವ ಪ್ರತಿ ಸಲ ಬರೆಯುವೆ
ಹೊರಲಾಗದೆ ಕುಸಿದಿರಬೇಕು
ಪಾಪ ಆ ಅಂಚೆ ತಲುಪಿಸುವವ..

ಆತ್ಮವಿಶ್ವಾಸಕೆ ಅರ್ಥ ನಿನ್ನ ಮಾತು
ಅನುರಾಗದ ಕನ್ನಡಿ ನಿನ್ನ ಕಣ್ಣು
ಅಮರತ್ವಕೆ ಶೀರ್ಷಿಕೆ ನಮ್ಮ ಪ್ರೀತಿ
ದಿಗಂತದ ಸೂಚಿ ನಿನ್ನ ನೆನಪು..

- ಅ. ರಾ. ತೇಜಸ್