ಅದೆಷ್ಟು ಸಾಲುಗಳ ಮರೆತಿರುವೆ ನಾನು
ಹಾಳೆಗೆ ಇಳಿಸದೆ,
ಕಂಡ ಕನಸುಗಳೊಟ್ಟಿಗೆ
ಕಳೆದ ಅನುಭವಗಳೊಂದಿಗೆ
ಅದು ತನ್ನದೆ ಕೊಂಡಿಗಳ ಬೆಸೆದು
ಕಾಣೆಯಾಗಿ
ಪುನಹ ಪತ್ತೆಯಾಗುತ್ತಲೆ ಇರುತ್ತದೆ
ಆದರೂ ಕಾಣದು ಈ ಹೊರ ಪ್ರಪಂಚಕ್ಕೆ
ಮರೆತಿರುವೆ ನಾನು
ಮರೆತಂತೆ ನಟಿಸಿ..
ಪ್ರೀತಿಯ ಹೊಡೆತಕ್ಕೆ ಹೃದಯದ ಪತನ
ನಂಬಿಕೆಗಳ ಕೂಪದಿ ಸಂಬಂಧಗಳ ಕಂಪನ
ಆ ನಗುವು, ಆ ಗೆಲುವು
ಕ್ಷಣಗಳಲಿ ಮರೆವು
ಎಷ್ಟೊಂದು ರಸ್ತೆಯಲಿ ಇದ್ದವು ಆರ್ಭಟ
ಕುಣಿದಂತೆ ಕುಣಿದೆ ಆಗೊಂದು ಮರ್ಕಟ
ವೇಷ ಅವಶೇಷದೆಡೆಗೆ ಈಗ!!
ಮತ್ತೊಂದು ಕವನ ಹಪಿತಪಿಸಿ ಬರುತಿದೆ
ನಿಲ್ಲು ಅಲ್ಲೆ!
ನಾ ಅದನು ಮರೆತಿರುವೆ..
ಬೇಕೆಂದು ಹೋದಷ್ಟು ಬೇಡದ ದಾರಿಯಲಿ
ಕಲ್ಲು, ಮಣ್ಣು
ತಿಂದಷ್ಟು ಕಹಿಯ ಹಣ್ಣು
ಆಡುವ ಮಾತಿಗೆ ಬೆಲೆಯಿರದ ಜಾಗದಲಿ
ಹಸಿವೆ ಹೆಚ್ಚು
ಮೆಚ್ಚಿಸುವ ಹಟದ ಹುಚ್ಚು
ಹುಚ್ಚು ಹೆಚ್ಚಾಗಿ ಅಚ್ಚಿಡುವ ಸಮಯಕ್ಕೆ
ಹೊಳೆದೆ ಬಿಟ್ಟಿತ್ತಲ್ಲವೇ ಕವನ?
ಬಿಟ್ಟುಬಿಡು, ನಾ ಅದನು ಮರೆತಿರುವೆ!!
ಮರೆವೊಂದು ವರವು
ನಾ ಅದರ ಪರವು
ಅ.ರಾ.ತೇಜಸ್