ಮೊಗ್ಗು ಹೂವಾಗುವುದೆಂದು
ಕಾದಿದ್ದೆ ಆ ಇಡೀ ರಾತ್ರಿ
ಎಂಥದ್ದೋ ದಿಗಿಲು,
ಅದು ಹೂವಾದರಷ್ಟೆ
ನನ್ನವಳ ಎದೆಗೂಡು ಅರಳುವುದು
ಕಣ್ಣು ಮಿಟುಕಿಸದೆ ಕಾದಿದೆ
ಆ ಒಂದೊಂದು ಎಸಳು
ನನ್ನೆಡೆಗೆ ತಿರುಗಲು
ನನ್ನೆದೆಯ ತಣಿಸಲು
ಚಂದಿರ ಅಣಿಕಿಸುತ್ತಿದ್ದ
ಹೋಗಿ ಮಲಗೆಂದು,
ನನಗಾಗ ಸಿಟ್ಟು
ನನ್ನೆದೆಯ ಜ್ವಾಲೆ ಅವನನ್ನು ಸುಡುವಷ್ಟು
ಗೂಬೆಗಳ ಕೂಗಿಗೆ ನಲುಗಲಿಲ್ಲ
ಬಾವಲಿಗಳ ಹೊಡೆತಕ್ಕೆ ಅಲುಗಾಡಲಿಲ್ಲ
ಧ್ಯಾನಸ್ಥನಾಗಿದ್ದೆ
ಹೂ ಅರಳಿದರಷ್ಟೆ ನಾ ಜೀವಂತ
ಕೊರೆಯುವ ಚಳಿ
ಭಯಗೊಳಿಸುವ ಆ ಕಡುಗಪ್ಪು ಕತ್ತಲು
ಇನ್ನೇನು ಸೂರ್ಯೋದಯದ ಸುಳಿವು
ಯಾಕೋ!! ದೇಹ ಸೋಲುವಂತಿತ್ತು
ಒಂದೊಂದು ಘಳಿಗೆಯ ಏಣಿಸುತ್ತಿದ್ದೆ
ಮೆಲ್ಲನೆ ಎಸಳುಗಳು ನಗಲಾರಂಭಿಸಿತು
ಕಾತರದ ಎದೆ, ಜಡಗಟ್ಟಿದ್ದ ಮೈ
ಒಳಗಿನಿಂದ ತೂಕಡಿಕೆಯ ಸಿಂಚನ
ಸೂರ್ಯ ಉದಯಿಸುವ ಆ ಕ್ಷಣ
ಹೂ ಅರಳಲು ಸಹ,
ಯಾವ ಭ್ರಾಂತಿಗೆ ಒಳಗಾದೆನೋ
ಹೇಸಿಗೆಯೆನಿಸುತ್ತಿದೆ, ಎರಡು ಕ್ಷಣ ತೂಕಡಿಸಿಬಿಟ್ಟೆ
ಜ್ವಲಿಸುವ ಕಿರಣವೊಂದು ಕಣ್ಣ ಕುಟ್ಟಿತು
ನೋಡಿದರೆ ಅಲ್ಲಿ ಹೂ ಇರಲಿಲ್ಲ
ಬರೀ ಮೌನ
ಆ ಹೂವ ಒಂದು ಹೆಣದ ಮೇಲೇರಿತ್ತು
ಅದರ ಮುಂದೆ ನನ್ನವಳು ಬಿಕ್ಕುತ್ತಿದ್ದಳು..
No comments:
Post a Comment