Friday, September 12, 2014

ಶೃತಿ ಇರದ ಹಾಡು ಸಹ ಈಗೀಗ ಮನವ ತಣಿಸುತ್ತಿದೆ

ಶೃತಿ ಇರದ ಹಾಡು ಸಹ
ಈಗೀಗ ಮನವ ತಣಿಸುತ್ತಿದೆ
ಬಯಲಿನ ಮೂಲೆಯಲ್ಲಿ ಕೂತು ಕಿರುಚಿದ ಮಾತು
ಪ್ರತಿಧ್ವನಿಸಿ ನನ್ನನ್ನೆ ಕೊಲ್ಲುವಾಗ
ಸಂಜೆಯ ರಕ್ತಸಿಕ್ತ ಆಗಸಕ್ಕೆಕೋ ತೃಪ್ತಿ..

ಮಿರುಮಿರುಗಿ ನಿಂತು ನೀ
ಕಾಡಿದ್ದ ಆ ಒಂದು ಕ್ಷಣ
ದಾರಿ ತಪ್ಪಿದ ಕಾಡಲ್ಲಿ ಅಚಾನಕ್ಕಾಗಿ ಕಂಡ
ಜಲಪಾತವು ಮನತಣಿಸಿದಂತೆ
ಮತ್ತೆ ಮತ್ತೆ ವಿಹ್ವಲಗೊಳ್ಳುತ್ತಿದ್ದೇನೆ
ಆ ಕೇಶರಾಶಿಯು ಹಾರಿದಂತೆಲ್ಲ..

ಕೆರೆಯ ಮಧ್ಯದ ಕಮಲದ ಬಳಿ
ಕಲ್ಲೆಸೆದಾಗ ನಿನ್ನಂತೆ ನಾಚುತಿದೆ
ಮೂಡಿದ ಆ ಮೇಲ್ಮೈ ಅಲೆಗಳು!
ಮತ್ತೆ ಆ ತಿಳಿ ನೀರು ಒಂದೇಸಮನೆ
ಏಕಾಂತ ಭಾವಕ್ಕೆ ತಳ್ಳುತ್ತದೆ
ಎಷ್ಟೊಂದು ಕಲ್ಲುಗಳು ನೀರ ಸೇರಿದೆ
ಅಲೆಗಳಿಲ್ಲ! ಕಮಲದ ನಗು ಸಹಿತ
ಮರೆಯಾಗಿ, ಮರೆಯದಂತಾಗಿದೆ..

Monday, March 10, 2014

ಹನಿಗಳು - ೨

           ೧
ನಿನಗೆಂದು ಹೊಸೆದಿದ್ದ
ಕನಸುಗಳೆಲ್ಲಾ
ಕಳಚಿಕೊಳ್ಳುತ್ತಿದೆ ಒಂದೊಂದೆ
ನಿನ್ನೆದೆಯ ಆವರಿಸಲು..
            ೨
ಕಾದು ಕಾದು ಕಂಗೆಟ್ಟ ನಲ್ಲೆಯ
ಕಣ್ಣಲ್ಲಿ ಆತಂಕವಿರಲಿಲ್ಲ
ತಡವಾದ ಪ್ರಿಯಕರನಿಗೆ
ತೊಂದರೆಯಾಗಿರಬಾರದೆಂಬ ಕಾಳಜಿಯಿತ್ತು
            ೩
ರಸ್ತೆಯ ಉದ್ದಗಲ ಹರಡಿರುವ
ಎಲೆಗಳ ನಡುವೆ
ಹೇಗೆ ಹುಡುಕಲಿ ಕನಸುಗಳ
ಬಿರುಕುಗಳೆ ಮೂಡಿರುವಲ್ಲಿ!
             ೪
ಸುಂದರ ಸಾಲುಗಳ ಬರೆದೆ
ಅವಳ ಸೌಂದರ್ಯವ ವರ್ಣಿಸಲು
ಬಣ್ಣದ ಮುಖವಾಡವ ತೊಟ್ಟ
ಕುರೂಪತನವ ತಿಳಿಯದೆ
             ೫
ಜಗದಗಲ ಹರಡಿರುವ
ಅರ್ಥಗರ್ಭಿತ ವಿಷಯಗಳ ನಡುವೆ
ನನ್ನವಳು ಅರಿಯಲಾಗದ ಪ್ರಶ್ನೆ
ಉತ್ತರ ಹುಡುಕುವುದೆ ನನ್ನೀ ಜೀವನ

Saturday, January 4, 2014

ಹೂ ಅರಳಲು

ಮೊಗ್ಗು ಹೂವಾಗುವುದೆಂದು
ಕಾದಿದ್ದೆ ಆ ಇಡೀ ರಾತ್ರಿ
ಎಂಥದ್ದೋ ದಿಗಿಲು,
ಅದು ಹೂವಾದರಷ್ಟೆ
ನನ್ನವಳ ಎದೆಗೂಡು ಅರಳುವುದು

ಕಣ್ಣು ಮಿಟುಕಿಸದೆ ಕಾದಿದೆ
ಆ ಒಂದೊಂದು ಎಸಳು
ನನ್ನೆಡೆಗೆ ತಿರುಗಲು
ನನ್ನೆದೆಯ ತಣಿಸಲು

ಚಂದಿರ ಅಣಿಕಿಸುತ್ತಿದ್ದ
ಹೋಗಿ ಮಲಗೆಂದು,
ನನಗಾಗ ಸಿಟ್ಟು
ನನ್ನೆದೆಯ ಜ್ವಾಲೆ ಅವನನ್ನು ಸುಡುವಷ್ಟು

ಗೂಬೆಗಳ ಕೂಗಿಗೆ ನಲುಗಲಿಲ್ಲ
ಬಾವಲಿಗಳ ಹೊಡೆತಕ್ಕೆ ಅಲುಗಾಡಲಿಲ್ಲ
ಧ್ಯಾನಸ್ಥನಾಗಿದ್ದೆ
ಹೂ ಅರಳಿದರಷ್ಟೆ ನಾ ಜೀವಂತ

ಕೊರೆಯುವ ಚಳಿ
ಭಯಗೊಳಿಸುವ ಆ ಕಡುಗಪ್ಪು ಕತ್ತಲು
ಇನ್ನೇನು ಸೂರ್ಯೋದಯದ ಸುಳಿವು
ಯಾಕೋ!! ದೇಹ ಸೋಲುವಂತಿತ್ತು

ಒಂದೊಂದು ಘಳಿಗೆಯ ಏಣಿಸುತ್ತಿದ್ದೆ
ಮೆಲ್ಲನೆ ಎಸಳುಗಳು ನಗಲಾರಂಭಿಸಿತು
ಕಾತರದ ಎದೆ, ಜಡಗಟ್ಟಿದ್ದ ಮೈ
ಒಳಗಿನಿಂದ ತೂಕಡಿಕೆಯ ಸಿಂಚನ

ಸೂರ್ಯ ಉದಯಿಸುವ ಆ ಕ್ಷಣ
ಹೂ ಅರಳಲು ಸಹ,
ಯಾವ ಭ್ರಾಂತಿಗೆ ಒಳಗಾದೆನೋ
ಹೇಸಿಗೆಯೆನಿಸುತ್ತಿದೆ, ಎರಡು ಕ್ಷಣ ತೂಕಡಿಸಿಬಿಟ್ಟೆ

ಜ್ವಲಿಸುವ ಕಿರಣವೊಂದು ಕಣ್ಣ ಕುಟ್ಟಿತು
ನೋಡಿದರೆ ಅಲ್ಲಿ ಹೂ ಇರಲಿಲ್ಲ
ಬರೀ ಮೌನ
ಆ ಹೂವ ಒಂದು ಹೆಣದ ಮೇಲೇರಿತ್ತು
ಅದರ ಮುಂದೆ ನನ್ನವಳು ಬಿಕ್ಕುತ್ತಿದ್ದಳು..