ನಿನ್ನ ಕುಡಿ ನೋಟವು
ನನ್ನದೆಗೆ ಬತ್ತದ ಸೆಲೆ
ಹರಿಯುವೆ ನೀನು ಕನಸಾಗಿ
ಪ್ರತಿ ಕ್ಷಣವು ಎಡಬಿಡದೆ
ನಿನ್ನ ಸಾಂಗತ್ಯದ ನೆನಪುಗಳೆಲ್ಲ
ಮೊಹರಾಗಿದೆ ನನ್ನೆದೆಯಲಿ..
ಅಳಿಸದ ರಂಗೋಲಿ ಬಿಡಿಸಿದ ಮೇಲೆ
ಇನ್ಯಾವ ಮಳೆ! ಇನ್ಯಾವ ಗಾಳಿ!
ಇನ್ನೆಷ್ಟು ಹೆಜ್ಜೆಗಳು ಮುಂದೋದರು
ಬಿಡದ ನೆನಪುಗಳು ಹಿಂದೆಯೇ ಹಿಂಬಾಲಿಸುತ್ತವೆ
ಅಲೆ ಬಂದು ಹೆಜ್ಜೆಗಳ ನುಂಗಿದರು
ಸಮುದ್ರದ ಆಳದಲ್ಲಿ ಆ ಹೆಜ್ಜೆ ಗುರುತು
ಭದ್ರವಾಗಿದೆ..
ಆ ಪುಟ್ಟ ಹೃದಯಕ್ಕೆ
ಅತ್ಯೋನ್ನತ ಭಾವ ತುಂಬಿದ ಒಡತಿ ನೀನಾಗಿರಲು
ಅದು ಒಡೆದರು -
ಪ್ರತಿ ಚೂರಿನಲ್ಲೂ ನಿನ್ನದೆ ಬಿಂಬ
ಆ ನಗೆಯ ಸಂಚಲ್ಲಿ
ಬಗೆಯ ಮಾತಲ್ಲಿ
ಅಡಗಿರುವ ಆಕರ್ಷಕತೆ
ಆರಾಧಿಸುವೆ ಅಷ್ಟೆ ವಿನಮ್ರವಾಗಿ
ಈ ಹೃದಯ ತುಳಿಯುವ ಮೊದಲು
ಕೇಳು ಕಿವಿಯಿಟ್ಟು
ಗುನುಗುತಿರುವ ಅನುರಾಗದ ಹಾಡೊಂದನು..
ಅ.ರಾ.ತೇ