Friday, September 12, 2014

ಶೃತಿ ಇರದ ಹಾಡು ಸಹ ಈಗೀಗ ಮನವ ತಣಿಸುತ್ತಿದೆ

ಶೃತಿ ಇರದ ಹಾಡು ಸಹ
ಈಗೀಗ ಮನವ ತಣಿಸುತ್ತಿದೆ
ಬಯಲಿನ ಮೂಲೆಯಲ್ಲಿ ಕೂತು ಕಿರುಚಿದ ಮಾತು
ಪ್ರತಿಧ್ವನಿಸಿ ನನ್ನನ್ನೆ ಕೊಲ್ಲುವಾಗ
ಸಂಜೆಯ ರಕ್ತಸಿಕ್ತ ಆಗಸಕ್ಕೆಕೋ ತೃಪ್ತಿ..

ಮಿರುಮಿರುಗಿ ನಿಂತು ನೀ
ಕಾಡಿದ್ದ ಆ ಒಂದು ಕ್ಷಣ
ದಾರಿ ತಪ್ಪಿದ ಕಾಡಲ್ಲಿ ಅಚಾನಕ್ಕಾಗಿ ಕಂಡ
ಜಲಪಾತವು ಮನತಣಿಸಿದಂತೆ
ಮತ್ತೆ ಮತ್ತೆ ವಿಹ್ವಲಗೊಳ್ಳುತ್ತಿದ್ದೇನೆ
ಆ ಕೇಶರಾಶಿಯು ಹಾರಿದಂತೆಲ್ಲ..

ಕೆರೆಯ ಮಧ್ಯದ ಕಮಲದ ಬಳಿ
ಕಲ್ಲೆಸೆದಾಗ ನಿನ್ನಂತೆ ನಾಚುತಿದೆ
ಮೂಡಿದ ಆ ಮೇಲ್ಮೈ ಅಲೆಗಳು!
ಮತ್ತೆ ಆ ತಿಳಿ ನೀರು ಒಂದೇಸಮನೆ
ಏಕಾಂತ ಭಾವಕ್ಕೆ ತಳ್ಳುತ್ತದೆ
ಎಷ್ಟೊಂದು ಕಲ್ಲುಗಳು ನೀರ ಸೇರಿದೆ
ಅಲೆಗಳಿಲ್ಲ! ಕಮಲದ ನಗು ಸಹಿತ
ಮರೆಯಾಗಿ, ಮರೆಯದಂತಾಗಿದೆ..