Sunday, July 14, 2013

ಹನಿಗಳು

ಕಂಗಳಲಿ ಮೊಳೆತ
ಪ್ರೀತಿಗೆ
ಕಣ್ಣ ಹನಿಗಳೆ
ಆಸರೆ
----------------
ತುಟಿಯ ಅಂಚಿನ
ತುಡಿತ
ಮುತ್ತಿನ ಹನಿಗಳಲಿ
ಬೆರೆತಿತು 
----------------
ಕನಸು ಕಾಣುವ
ರೀತಿಗೆ
ಅವಳ ಹೆಸರೆ
ಶೀರ್ಷಿಕೆ
----------------
ಮನಸ್ಸಿನ ದುರ್ಗಮ
ದಾರಿಯನೆಲ್ಲ
ಅವಳ ಪ್ರೀತಿಯು
ಸುಗಮವಾಗಿಸಿದೆ
----------------
- ಅ.ರಾ.ತೇಜಸ್

Tuesday, July 2, 2013

ಒಂದಷ್ಟು ಕವನಗಳು..


ನನ್ನವಳ ಹಣೆಬೊಟ್ಟು
ನನ್ನೆದೆಗೆ ಕಾಲಿಟ್ಟು
ಕಾಡುತಿದೆ ಕನಸುಗಳ;
ಬದಿಗಿಟ್ಟ ಬಿಚ್ಚೋಲೆ
ಬೀರುತಿದೆ ಮಂದಹಾಸ
ಕಸಿದು ನನ್ನೆದೆಯ ಮನಸ..


ಮಿಂಚೊಂದು ಹೊಮ್ಮಿತು
ಕಾರ್ಮೋಡದ ಅಂಚಿನಿಂದ,
ನನ್ನಯ ಸಹನೆಯ ಮಧ್ಯದಿ -
ಸೀಳಿ ಹೋಯಿತು ಅರೆಕ್ಷಣ..
ಸಹನೆಯ ಹೊತ್ತು ಕಾದಿದ್ದೆ
ನನ್ನ ನಲ್ಲೆಯ ಕಾಣಲು,
                ನಲ್ಲೆಯು ಕಾಣಲಿಲ್ಲ - ಸಹನೆಯು ಸಾಯಲಿಲ್ಲ
ಮುರಿದ ಸಹನೆಯ ಹೊತ್ತು
ಕಾದಿರುವೆ ಅದೇ ಮಿಂಚಿಗೆ
ನನ್ನವಳ ಕಾಣುವ ಆ ಹೊತ್ತಿಗೆ..



ಹೊಗೆಯಂತೆ ಕೆಣಕೆಬ್ಬಿಸಿದೆ
ಈ ಮೋಹವ;
ಸುಳಿಯಂತೆ ಸೆಳೆದೆ 
ನನ್ನೋಳಗಿನ ಪ್ರೇಮವ;
ನಿನ್ನ ಕಣ್ಣಂಚಿನಲಿ ಯಾವುದದು -
ಸೆಲೆಯು?
ಅವಿತಿದ್ದ ಕನಸಿಗೆ ಹಾಕಿತದು -
ಬಲೆಯು..
ರೆಪ್ಪೆ ಬಡಿತದಲ್ಲೂ ನಿನ್ನ ಹೆಸರಿನ ಕೂಗು,
ಎದೆಯಿಟ್ಟು ಕೇಳುತ್ತ ಮನವ ನೀಗು..


ಖಾಲಿ ಹಾಳೆಯ ಪದ್ಯದಲ್ಲಿ
ನನ್ನವಳ ಹೆಸರಿಹುದು, ಕಂಡಿರಾ?
ಮನದಲ್ಲಿ ತುಂಬಿ
ನೆನಪಲ್ಲಿ ತುಳುಕಿ
ಹಗಲಿರುಳು ಕಾಡುವಳು ನಲ್ಲೆ
ದಾಟಿಸಿ ಪ್ರೇಮೋಲ್ಲಾಸದ ಎಲ್ಲೆ..

 

ನಿರೀಕ್ಷೆ..

ಹಸಿದ ಹೊಟ್ಟೆಯ ಮೇಲೆ
ರೊಟ್ಟಿ ತಟ್ಟಿದನಾತ
ಆ ಹಸಿವೆಯ ಕಾವಲ್ಲೆ
ಬೇಯಿಸಿದನು ರೊಟ್ಟಿಯ..
ತಿಂದು ತೇಗಿದ ಮೇಲೆ
ಉಳಿದಿದನು ಬಿಸಾಡಿದ,
ಕತ್ತಲಿಗೆ ಸೇರಿತು
ಆ ಹಸಿದ ಹೊಟ್ಟೆಯು
ರೊಟ್ಟಿಯ ನಿರೀಕ್ಷೆಯಲ್ಲೆ..

-ಅ.ರಾ.ತೇಜಸ್